ಸಾರಾಂಶ
ತಾಲೂಕು ಕಚೇರಿ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಹೋರಾಟ
ಕನ್ನಡಪ್ರಭ ವಾರ್ತೆ, ಕಡೂರುಅನಧಿಕೃತ ನೀರು ಹಾಯಿಸುವವರ ಮೋಟಾರ್ ಮತ್ತು ಪೈಪ್ ಗಳನ್ನು ತೆರವುಗೊಳಿಸಿ ಜನ ಜಾನುವಾರುಗಳಿಗಾಗಿ ಚಿಕ್ಕಂಗಳ ಕೆರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕಡೂರು ತಾಲೂಕಿನ ಚಿಕ್ಕಂಗಳ ಗ್ರಾಮದ ಸುತ್ತಮುತ್ತಲ ಗ್ರಾಮಸ್ಥರು ಗುರುವಾರ ತಾಲೂಕು ಕಚೇರಿ ಆವರಣದಲ್ಲಿ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಚಿಕ್ಕಂಗಳ ಕೆರೆ ವ್ಯಾಪ್ತಿಯ ಕನ್ನೇನಹಳ್ಳಿ, ಅಂದೇನಹಳ್ಳಿ, ಚಿಕ್ಕಂಗಳ, ಗೋವಿಂದಪುರ ಮತ್ತು ಹೊಸಹಳ್ಳಿ ಗ್ರಾಮಸ್ಥರ ಪ್ರತಿಭಟನೆಯಲ್ಲಿ ತಾಲೂಕು ಮಾದಿಗ ಸಮಾಜದ ಅಧ್ಯಕ್ಷ ಚಿಕ್ಕಂಗಳ ಲಕ್ಷ್ಮಣ್ ಮಾತನಾಡಿ, ಬೇಸಿಗೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ನೀರಿನ ಹಾಹಾಕಾರ ಹೆಚ್ಚಾಗುತ್ತಿದೆ. ಮದಗದಕೆರೆಯಿಂದ ಗ್ರಾಮದ ಕೆರೆಗೆ ಬರಬೇಕಾದ ನೀರಲ್ಲಿ ಒಂದು ಹನಿ ಬರದಂತೆ ಮದಗಕೆರೆ ನೀರಿನ ಕಾಲುವೆಗಳಲ್ಲಿ ಅನಧಿಕೃತವಾಗಿ ಮೋಟಾರ್ ಗಳಿಂದ ನೀರು ಹಾಯಿಸಿ ಕೊಳ್ಳುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ.
ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಈ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಮದಗಕೆರೆಯಲ್ಲಿ ತೂಬು ತೆಗೆಯುವ ಹಂತಕ್ಕೆ ಬಂದರೂ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಅನಧಿಕೃತವಾಗಿ ನೀರು ಹಾಯಿಸಿಕೊಳ್ಳುವವರ ಪರವಾಗಿದ್ದು, ತಾರತಮ್ಯ ಅನುಸರಿಸುತ್ತಿದ್ದಾರೆ ಎಂದು ದೂರಿದರು.ಕೆರೆ ನೀರು ಬಳಕೆದಾರರ ಸಂಘದ ಅಧ್ಯಕ್ಷ ಸಗುನಪ್ಪ ಮಾತನಾಡಿ, ಚಿಕ್ಕಂಗಳ ಕೆರೆ ವ್ಯಾಪ್ತಿಯ ಐದು ಗ್ರಾಮಗಳ ರೈತರು ಹಾಗು ಜಾನುವಾರುಗಳಿಗೆ ಕನಿಷ್ಠ ಕುಡಿಯಲು ನೀರು ಸಿಗದ ಪರಿಸ್ಥಿತಿ ಎದುರಾಗಿದೆ. ಜ.31ರಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಮಡಬಾಯಿಗಳನ್ನು ಮುಚ್ಚಿಸುವ ಕಾರ್ಯಾಚರಣೆ ಕೈಗೊಂಡರೂ ದಿಢೀರ್ ಎಂದು ಮೊಟಕುಗೊಳಿಸಿ ಯಾವುದೇ ಸ್ಪಷ್ಟೀಕರಣ ನೀಡದೆ ತೆರಳಿದ್ದಾರೆ.
ಗ್ರಾಮದ ಕೆರೆಗೆ ನೀರು ಹರಿಸುವ ಕಾರ್ಯ ಮಾಡಬೇಕಿದೆ. ಅನಧಿಕೃತವಾಗಿ ಹಾಯಿಸಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕು. ಅವರ ವಿರುದ್ಧ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳದಿದ್ದರೆ ನಮ್ಮ ಹಕ್ಕಿನ ನೀರಿಗಾಗಿ ಹೋರಾಟ ಅನಿವಾರ್ಯತೆ ಎಂದು ಎಚ್ಚರಿಸಿದ ಅವರು, ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಿ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಅಂದೇನಹಳ್ಳಿ ಚಂದ್ರಶೇಖರ್, ವಿವಿಧ ಗ್ರಾಮಸ್ಥರಾದ ಗೋವಿಂದರಾಜು, ಸಿ.ಟಿ. ಶಿವಮೂರ್ತಿ, ಹನುಮಂತಪ್ಪ, ಯೋಗೀಶ್, ನಟರಾಜ್, ಆನಂದ್, ಕೆಂಚಪ್ಪ, ಲಿಂಗರಾಜು, ಮೂರ್ತಿ ಮತ್ತಿತರಿದ್ದರು.
---ಬಾಕ್ಸ್ ---ಸಮಸ್ಯೆ ನಿವಾರಣೆಗೆ ಕಾಲಾವಕಾಶ ನೀಡಿ
ಜ.31ರಂದು ಮದಗದ ಕೆರೆ ಕಾಲುವೆಗಳಲ್ಲಿ ಮಡಬಾಯಿಗಳನ್ನು ಮುಚ್ಚಿಸಲು ಕೈಗೊಂಡಿದ್ದ ಕಾರ್ಯಾಚರಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ ಸಣ್ಣ ನೀರಾವರಿ ಇಲಾಖೆ ಅಭಿಯಂತರರ ಕಾರ್ಯವೈಖರಿಗೆ ಅಕ್ರೋಶಗೊಂಡಿದ್ದ ಗ್ರಾಮಸ್ಥರು ಗುರುವಾರ ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ಸಣ್ಣ ನೀರಾವರಿ ಇಲಾಖೆ ಎಇಇ ದಯಾಶಂಕರ್ ಆಗಮಿಸಿ ಸ್ಪಷ್ಟೀಕರಣ ನೀಡುವವರೆಗೂ ಕದಲುವುದಿಲ್ಲ ಎಂದು ಪಟ್ಟುಹಿಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ಪಿ.ಕವಿರಾಜ್ ದೂರವಾಣಿ ಮಾಡಿ ಎಇಇ ದಯಾಶಂಕರ್ ಅವರನ್ನು ಸ್ಥಳಕ್ಕೆ ಕರೆಸಿ ಕೊಂಡು ಅನಧಿಕೃತವಾಗಿ ನೀರು ಹಾಯಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರ ಸಮ್ಮುಖದಲ್ಲಿ ಸೂಚಿಸಿದರು.
ಆನಂತರ ಎಇಇ ದಯಾಶಂಕರ್ ಮಾತನಾಡಿ, ಗ್ರಾಮದಲ್ಲಿ ಕೆರೆ ಏರಿ ಪ್ರದೇಶಕ್ಕೆ ಹಾನಿಯಾಗದಂತೆ ಮುಂಜಾಗೃತ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈಗಾಗಲೇ ಕಾಲುವೆಗಳಲ್ಲಿ ಪೈಪ್‌ಗಳು ಸಾಕಷ್ಟು ಹಾನಿಯಾಗಿವೆ. ಇದಕ್ಕೆ ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಅಗತ್ಯ ಕ್ರಮವಹಿಸಿ ನೀರಿನ ಸಮಸ್ಯೆ ಬಗೆಹರಿಸಲು ರೈತರು 3 ದಿನದ ಕಾಲಾವಕಾಶ ನೀಡುವಂತೆ ಕೋರಿದರು.--ಕೋಟ್---
ಚಿಕ್ಕಂಗಳ ಗ್ರಾಮದ ಕೆರೆಗೆ ನೀರು ಹಂಚಿಕೆ ವಿಚಾರವಾಗಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದರ ಹಿನ್ನಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ಮುಖ್ಯ ಇಂಜಿನಿಯರ್ ಅವರಿಗೆ ಗ್ರಾಮಕ್ಕೆ ಭೇಟಿ ನೀಡಿ ನೀರಿನ ಹಂಚಿಕೆಯಲ್ಲಿ ಉದ್ಬವಿಸಿರುವ ಸಮಸ್ಯೆಯನ್ನು ಬಗೆಹರಿಸಿಕೊಡುವಂತೆ ಪತ್ರ ಬರೆಯಲಾಗಿದೆ.- ಎಂ.ಪಿ. ಕವಿರಾಜ್,
ತಹಸೀಲ್ದಾರ್1ಕೆಕೆಡಿಯು1.
ಕಡೂರು ಪಟ್ಟಣದ ತಾಲ್ಲೂಕು ಕಚೇರಿ ಆವರಣದ ಬಳಿ ಚಿಕ್ಕಂಗಳ ಕೆರೆಗೆ ನೀರು ಹಾಯಿಸುವಂತೆ ಒತ್ತಾಯಿಸಿ ವಿವಿಧ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.