ಹಕ್ಕುಪತ್ರ ನೀಡಲು ಆಗ್ರಹಿಸಿ ಪ್ರತಿಭಟನೆ

| Published : Aug 08 2024, 01:32 AM IST

ಸಾರಾಂಶ

ಹಕ್ಕುಪತ್ರ ನೀಡಲು ಆಗ್ರಹಿಸಿ ಗುಬ್ಬಿಯಲ್ಲಿ ರೈತರಿಂದಪ್ರತಿಭಟನೆ

ಕನ್ನಡಪ್ರಭವಾರ್ತೆ ಗುಬ್ಬಿ

ಬಗರ್ ಹುಕುಂ ಸಾಗುವಳಿ ಭೂಮಿಯ ಪಹಣಿಯಲ್ಲಿ ಅರಣ್ಯ ಇಂಡೀಕರಣ ರದ್ದುಪಡಿಸಿ ಸರ್ಕಾರಿ ಕಂದಾಯ ಭೂಮಿಯಾಗಿ ಮರು ಸ್ಥಾಪಿಸಲು ಹಾಗೂ ಸಕ್ರಮ ಕೋರಿ ಸಲ್ಲಿಸಿದ್ದ ಬಡ ರೈತರ ಅರ್ಜಿಯನ್ನ ಮಾನ್ಯ ಮಾಡಿ ಹಕ್ಕುಪತ್ರ ನೀಡುವಂತೆ ಒತ್ತಾಯಿಸಿ ರೈತರು ತಾಲೂಕು ಕಚೇರಿ ಮುಂದೆ ಪ್ರತಿಭಟಿಸಿ ತಹಸೀಲ್ದಾರ್ ಬಿ.ಆರತಿಗೆ ಮನವಿ ಸಲ್ಲಿಸಿದರು.ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚನ್ನಬಸವಯ್ಯ ಮಾತನಾಡಿ, ರಾಜ್ಯದಲ್ಲಿ 14 ಲಕ್ಷಕ್ಕೂ ಅಧಿಕ ಬಡ ರೈತರ ಬಗರ್ ಹುಕುಂ ಅರ್ಜಿ ಸರ್ಕಾರದ ಮುಂದಿದೆ. ಒಂದೂವರೆ ವರ್ಷ ಕಳೆದರೂ ಅಕ್ರಮ ಸಕ್ರಮ ಮಾಡುವ ಮಾತಿಲ್ಲ. ಚುನಾವಣಾ ಸಂದರ್ಭದಲ್ಲಿ ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿಲ್ಲ ಎಂದರು.

ಜಿಲ್ಲಾ ಕಾರ್ಯದರ್ಶಿ ಅಜ್ಜಪ್ಪ ಮಾತನಾಡಿ, ಸಮಿತಿಗೆ ಅತೀ ಹೆಚ್ಚು ಅರ್ಜಿ ತುಮಕೂರು ಜಿಲ್ಲೆಯಲ್ಲಿ ಪೆಂಡಿಂಗ್ ಇದೆ. ನಮ್ಮ ತಾಲೂಕಿನಲ್ಲಿ 60 ಸಾವಿರ ಅರ್ಜಿಗೆ ಉತ್ತರ ಸಿಕ್ಕಿಲ್ಲ. ಅರ್ಹರಿಗೆ ಭೂಮಿ ನೀಡದೆ ಅನುಭವದಾರ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆದಿದೆ. ಹತ್ತಾರು ವರ್ಷದಿಂದ ಕೃಷಿ ನಡೆಸಿರುವ ರೈತರನ್ನು ಅರ್ಹತೆ ಆಧಾರದ ಮೇಲೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ದೊಡ್ಡನಂಜಯ್ಯ, ತಾಲೂಕು ಕಾರ್ಯದರ್ಶಿ ಬಸವರಾಜು, ಬಗರ್ ಹುಕುಂ ಹೋರಾಟ ಸಮಿತಿಯ ಅಧ್ಯಕ್ಷ ನಾಗರಾಜು, ರಾಜಮ್ಮ, ಎಸ್.ಕೆ.ಕೃಷ್ಣಮೂರ್ತಿ, ರೇಣುಕಮ್ಮ, ಬಸವರಾಜು, ನರಸಿಂಹಮೂರ್ತಿ ಇದ್ದರು.