ಸಾರ್ವಜನಿಕ ಶೌಚಾಲಯಗಳ ಬಳಕೆಗೆ ನೀಡಲು ಒತ್ತಾಯಿಸಿ ಪ್ರತಿಭಟನೆ

| Published : Dec 17 2024, 01:04 AM IST

ಸಾರ್ವಜನಿಕ ಶೌಚಾಲಯಗಳ ಬಳಕೆಗೆ ನೀಡಲು ಒತ್ತಾಯಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಸಾರ್ವಜನಿಕ ಶೌಚಾಲಯ ಬಳಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ನಗರಸಭೆಯ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಹಾವೇರಿ: ಸಾರ್ವಜನಿಕರಿಗೆ ಬಳಕೆಯಾಗಲೆಂದು ಸ್ಥಳೀಯ ನಗರಸಭೆಯಿಂದ ನಿರ್ಮಿಸಿದ ಹಲವು ಶೌಚಾಲಯಗಳ ಕಾಮಗಾರಿ ಪೂರ್ಣಗೊಂಡಿದ್ದರೂ ಸಹಿತ ಬೀಗ ಜಡಿಯಲಾಗಿದೆ. ಅವುಗಳನ್ನು ಜನರು ಬಳಸಲು ಅವಕಾಶ ಕಲ್ಪಿಸುವಂತೆ ಒತ್ತಾಯಿಸಿ ನಗರಸಭೆಯ ಕೆಲ ಸದಸ್ಯರು ಹಾಗೂ ಸಾರ್ವಜನಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಎಂ.ಜಿ. ರಸ್ತೆಯ ಪಾದಗಟ್ಟಿ ಬಳಿ ಕುಳಿತು ನಗರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ನಗರಸಭೆ ಸದಸ್ಯ ಮಂಜುನಾಥ ಬಿಷ್ಟಣ್ಣನವರ, ಸ್ವಚ್ಛ ಭಾರತ ಮಿಶನ್ ಅಡಿ ನಗರಸಭೆಯಿಂದ ಏಳು ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗುತ್ತಿದ್ದು, ಎರಡು ಕಾಮಗಾರಿ ಪೂರ್ಣಗೊಂಡು ಜನರ ಬಳಕೆಗೆ ಸಜ್ಜಾಗಿವೆ. ಉಳಿದ 5 ಶೌಚಾಲಯಗಳ ಕಾಮಗಾರಿ ಇನ್ನೂ ನಡೆಯುತ್ತಿದೆ. ಪೂರ್ಣಗೊಂಡ ಶೌಚಾಲಯಗಳನ್ನು ಬಳಸಲು ಅನುಕೂಲ ಕಲ್ಪಿಸುವಂತೆ ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದ್ದರೂ ಇದುವರೆಗೆ ತೆರೆಯುತ್ತಿಲ್ಲ. ಈಗಾಗಲೇ ಕಿಡಿಗೇಡಿಗಳು ಗಾಜು, ಮೆಟ್ಟಿಲುಗಳನ್ನು ಹಾಳು ಮಾಡುತ್ತಿದ್ದಾರೆ. ಕಟ್ಟಡ ಹಾಳಾಗುವ ಮೊದಲೇ ಶೌಚಾಲಯ ಸಾರ್ವಜನಿಕರಿಗೆ ಉಪಯೋಗ ಆಗಲೆಂದು ಒತ್ತಾಯಿಸುತ್ತಿದ್ದೇವೆ ಎಂದರು. ಇನ್ನೋರ್ವ ನಗರಸಭೆ ಸದಸ್ಯೆ ರೇಣುಕಾ ಮಾತನಾಡಿ, ಎಂ.ಜಿ. ರಸ್ತೆ ಮಾರುಕಟ್ಟೆ ಪ್ರದೇಶವಾಗಿರುವುದರಿಂದ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಜನರು ಓಡಾಡುತ್ತಾರೆ. ಬಹುತೇಕ ನಗರ ಹಾಗೂ ಗ್ರಾಮೀಣ ಭಾಗಗಳಿಂದ ಬರುವ ಸಾರ್ವಜನಿಕರಿಗೆ ಹಾಗೂ ಮಹಿಳೆಯರಿಗೆ ಶೌಚಾಲಯಕ್ಕೆ ತೆರಳಲು ಬಹಳಷ್ಟು ಸಮಸ್ಯೆಯಾಗುತ್ತಿದೆ. ಪುರುಷರೇನೋ ರಸ್ತೆ ಮರೆಯಲ್ಲಿ ಹೋಗುತ್ತಾರೆ. ಆದರೆ, ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಕೂಡಲೇ ನಗರಸಭೆ ಅಧಿಕಾರಿಗಳು ಜನರ ಬಳಕೆಗೆ ಶೌಚಾಲಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.