ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್‌ ವರ್ಗಾವಣೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ನೇತೃತ್ವದಲ್ಲಿ ಗ್ರಾಮದ ನೂರಾರು ರೈತರು, ಬ್ಯಾಂಕಿನ ಗ್ರಾಹಕರು ಸೋಮವಾರ ಕೆವಿಜಿ ಬ್ಯಾಂಕ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಹಾವೇರಿ: ತಾಲೂಕಿನ ಕನವಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್‌ ವರ್ಗಾವಣೆಗೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ನೇತೃತ್ವದಲ್ಲಿ ಗ್ರಾಮದ ನೂರಾರು ರೈತರು, ಬ್ಯಾಂಕಿನ ಗ್ರಾಹಕರು ಸೋಮವಾರ ಕೆವಿಜಿ ಬ್ಯಾಂಕ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕನವಳ್ಳಿ ಗ್ರಾಮದ ರೈತ ಮುಖಂಡರು, ಬ್ಯಾಂಕಿನ ಗ್ರಾಹಕರು, ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮ್ಯಾನೇಜರ್ ಕುಮಾರ್ ಡ್ರೋನ್ ಅವರು ಬ್ಯಾಂಕಿಗೆ ಬರುವ ಗ್ರಾಹಕರ ಜತೆಗೆ ಅನುಚಿತವಾಗಿ ವರ್ತಿಸುತ್ತಾರೆ. ಗ್ರಾಹಕರ ಜತೆಗೆ ಅಸಭ್ಯವಾಗಿ ನಡೆದುಕೊಳ್ಳುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಬಂಗಾರ ಸಾಲ ನೀಡಲು ಹಲವಾರು ಬಾರಿ ಓಡಾಡಿಸುವುದು, ರೈತರಿಗೆ ಅಗೌರವ ತೋರುವುದು, ಸಾಲ ಕೇಳಿದರೆ ಅರ್ಜಿ ಹಾಕಿ ಎಂದು ಏಕವಚನದಲ್ಲಿ ನಿಂದನೆ ಮಾಡುತ್ತಾರೆ ಎಂದು ಆರೋಪಿಸಿದರು.ಬ್ಯಾಂಕ್ ಮ್ಯಾನೇಜರ್ ದುರ್ವರ್ತನೆಯಿಂದ ಬೇಸತ್ತು ರೈತ ಸಂಘ, ಗ್ರಾಮ ಪಂಚಾಯಿತಿಯಿಂದ ಸಾಕಷ್ಟು ಬಾರಿ ಸಂಬಂಧಿಸಿದ ಬ್ಯಾಂಕಿನ ಪ್ರಬಂಧಕರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ೧೧೨ ಪೊಲೀಸ್ ಸಿಬ್ಬಂದಿ, ಗುತ್ತಲ ಪೊಲೀಸ್ ಠಾಣೆಯ ಎಸ್‌ಐಅವರು ಬಂದು ಬುದ್ಧಿ ಹೇಳಿದರೂ ಸಹಿತ ತಿದ್ದಿಕೊಳ್ಳದೇ ಜನಸಾಮಾನ್ಯರು, ಬ್ಯಾಂಕಿಗೆ ಬರುವ ಗ್ರಾಹಕರ ಮೇಲೆ ಮ್ಯಾನೇಜರ್ ದಬ್ಬಾಳಿಕೆ ನಡೆಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆ ಮ್ಯಾನೇಜರ್ ವರ್ತನೆಯಿಂದ ಬೇಸತ್ತು ಅನಿವಾರ್ಯವಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಕೂಡಲೇ ಬ್ಯಾಂಕಿನ ಪ್ರಬಂಧಕರು ಮ್ಯಾನೇಜರ್ ಕುಮಾರ್ ಡ್ರೋನ್‌ರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ನವೀನಕುಮಾರ, ಸಿನಿಯರ್ ಮ್ಯಾನೇಜರ್ ತಿರಕಪ್ಪ ದಫೆದಾರ ರೈತರಿಂದ ಮನವಿ ಸ್ವೀಕರಿಸಿ, ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಇತ್ಯರ್ಥಕ್ಕೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈ ವೇಳೆ ರೈತ ಸಂಘ ಹಾಗೂ ಹಸಿರು ಸೇನೆ ಗ್ರಾಮ ಘಟಕದ ಅಧ್ಯಕ್ಷ ಮಂಜುನಾಥ ಕದಂ, ತಾಲೂಕಾಧ್ಯಕ್ಷ ದಿಳ್ಳೆಪ್ಪ ಮಣ್ಣೂರ, ಜಿಲ್ಲಾ ಕಾರ್ಯಾಧ್ಯಕ್ಷ ಶಿವಬಸಪ್ಪ ಗೋವಿ, ಪರಮೇಶಪ್ಪ ದೊಡ್ಡಜಾಲಿ, ಮಂಜುನಾಥ ಸಿದ್ದಗೂಳಪ್ಪನವರ, ಆರ್.ಜಿ. ಭೂಸಿ, ಜಿ.ಎಂ. ಬೇವಿನಮರದ, ಮಹೇಶ ಕಾಟೇನವರ, ಮೌಲಾ ಬನ್ನಿಹಟ್ಟಿ, ಸುದೀಪ ಬಳಿಗಾರ, ರವಿ ಹುಣಸಿಮರದ, ಜಗದೀಶ ಭರಡಿ, ಕೆ.ಎಲ್. ಯಲಿಗಾರ ಸೇರಿದಂತೆ ಕನವಳ್ಳಿ, ಹನುಮನಹಳ್ಳಿ, ಭರಡಿ ಗ್ರಾಮಗಳ ಬ್ಯಾಂಕಿನ ಗ್ರಾಹಕರು ಪಾಲ್ಗೊಂಡಿದ್ದರು.