ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆ ತಿದ್ದುಪಡಿಗಳನ್ನು ಹಿಂದಕ್ಕೆ ಪಡೆಯಬೇಕು ಹಾಗೂ ಸಾರ್ವಜನಿಕ ವಲಯಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯಿಂದ (ಜೆಸಿಟಿಯು) ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಳ್ಳಲು ಉದ್ದೇಶದಿಂದ ಕೇಂದ್ರ ಸರ್ಕಾರ ನಾಲ್ಕು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತರಲು ಮುಂದಾಗಿದೆ. ಇದರಿಂದ ದುಡಿವ ಜನರ ಪ್ರಜಾಸತ್ತಾತ್ಮಕ ಹಕ್ಕುಗಳು ದಮನವಾಗಲಿವೆ.
ಕನಿಷ್ಠ ವೇತನ, ಸಾಮಾಜಿಕ ಭದ್ರತೆ, ಮೂಲಭೂತ ಹಕ್ಕುಗಳು, ಸಂಘಟನೆ ಮಾಡುವ ಹಕ್ಕು, ಮನ್ನಣೆ, ಸಾಮೂಹಿಕ ಚೌಕಾಸಿ, ಆಂದೋಲನಗಳು ಮತ್ತು ಮುಷ್ಕರದ ಹಕ್ಕು ಸೇರಿದಂತೆ ಸಾಮೂಹಿಕ ಪ್ರತಿಭಟನೆಯ ಹಕ್ಕುಗಳನ್ನು ಲೇಬರ್ ಕೋಡ್‌ಗಳು ಕಸಿದುಕೊಳ್ಳುತ್ತವೆ. ಇದಕ್ಕೆ ಕಾರ್ಮಿಕ ಸಂಘಟನೆಗಳು ಆಸ್ಪದ ಮಾಡಿಕೊಡುವುದಿಲ್ಲ. ಕೇಂದ್ರದ ನೀತಿಯ ವಿರುದ್ಧ ದೇಶಮಟ್ಟದಲ್ಲಿ ದೊಡ್ಡ ಆಂದೋಲನಕ್ಕೆ ಕರೆ ನೀಡಲಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ತನ್ನ ನೀತಿಗಳಿಂದ ಹಿಂದಕ್ಕೆ ಸರಿಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಅಂದಿನ ಕೇಂದ್ರದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಜಾಗತೀಕರಣ ಹಾಗೂ ಖಾಸಗೀಕರಣ ನೀತಿಗಳಿಂದಾಗಿ ಕಾರ್ಮಿಕ ಹಕ್ಕುಗಳಿಗೆ ಚ್ಯುತಿಯಾದವು. ಹಾಲಿ ಕೇಂದ್ರದ ಬಿಜೆಪಿ ಸರ್ಕಾರವು ಸಹ ಅತ್ಯಂತ ವೇಗವಾಗಿ ಖಾಸಗೀಕರಣ ಹಾಗೂ ಜಾಗತೀಕರಣ ನೀತಿಯಿಂದ ಜಾರಿಗೊಳಿಸಲು ಮುಂದಾಗಿರುವುದರಿಂದ ಇದರ ಪರಿಣಾಮ, ಕಾರ್ಮಿಕ ವರ್ಗದ ಮೇಲಾಗುತ್ತಿದೆ ಎಂದು ತಿಳಿಸಿದರಲ್ಲದೆ, ಕೇಂದ್ರದ ನೀತಿ ಖಂಡಿಸಿ ಜು. 9 ರಂದು ಅಖಿಲ ಭಾರತ ಮುಷ್ಕರ ಹಮ್ಮಿಕೊಳ್ಳಲಾಗಿದ್ದು, ದೇಶದ ಲಕ್ಷಾಂತರ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡು ಹಕ್ಕುಗಳ ರಕ್ಷಣೆಗೆ ಒತ್ತಾಯಿಸಲಿದ್ದಾರೆ ಎಂದರು.
ಎಐಯುಟಿಯುಸಿ ಮುಖಂಡ ಎ.ದೇವದಾಸ್ ಹಾಗೂ ಸಿಐಟಿಯುನ ಸತ್ಯಬಾಬು ಮಾತನಾಡಿ, ವಿದ್ಯುತ್ ಕಾಯ್ದೆ ತಿದ್ದುಪಡಿ ಮಸೂದೆ 2023 ಹಿಂದಕ್ಕೆ ಪಡೆಯಬೇಕು. ಸ್ಮಾರ್ಟ್ ಮೀಟರ್ ಅಳವಡಿಕೆ ನಿಲ್ಲಿಸಬೇಕು. ಮಹಿಳೆಯರಿಗೆರಾತ್ರಿ ಪಾಳಿ ಅವಕಾಶ ನೀಡುವ ಆದೇಶವನ್ನು ಹಿಂಪಡೆಯಬೇಕು. ಎಲ್ಲಾ ಕಾರ್ಮಿಕರಿಗೆ ಕನಿಷ್ಠ ವೇತನ 36 ಸಾವಿರ ರು. ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. ಆರ್.ಸೋಮಶೇಖರಗೌಡ ಹಾಗೂ ಶಾಂತಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಸಂಘಟನೆಯ ಜಿಲ್ಲಾ ಪ್ರಮುಖರಾದ ಚೇತನ್, ಪಾರ್ವತಮ್ಮ, ಜಯಮ್ಮ, ನಾಗಮ್ಮ, ಲಕ್ಷ್ಮಿದೇವಿ, ರಮಾದೇವಿ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))