ಸಾರಾಂಶ
ಶಿರಹಟ್ಟಿ: ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯಪಾಲರು ರಾಜಕೀಯ ಪಕ್ಷದ ಏಜೆಂಟರಂತೆ ವರ್ತಿಸುತ್ತಿರುವುದು ಅಕ್ಷಮ್ಯ. ಅವರನ್ನು ರಾಷ್ಟ್ರಪತಿಗಳು ತಕ್ಷಣವೇ ವಜಾ ಮಾಡಬೇಕು ಎಂದು ಒತ್ತಾಯಿಸಿ ಎಐಸಿಸಿ ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಅಧ್ಯಕ್ಷ ಸಂತೋಷ ಕುರಿ ಹಾಗೂ ಸಿದ್ದರಾಮಯ್ಯ ಅಭಿಮಾನಿ ಬಳಗ ಶಿರಹಟ್ಟಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.ಈ ವೇಳೆ ಎಐಸಿಸಿ ಮಾನವ ಹಕ್ಕುಗಳ ಜಿಲ್ಲಾ ಸಮಿತಿ ಅಧ್ಯಕ್ಷ ಸಂತೋಷ ಕುರಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ನವರು ರಾಜಕೀಯ ಪ್ರೇರಿತವಾಗಿ ಮಾಡಿರುವ ಆರೋಪವನ್ನೇ ಆಧಾರವಾಗಿಟ್ಟುಕೊಂಡು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಸರಿಯಲ್ಲ. ರಾಜ್ಯಪಾಲರು ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಡಾ ನಿವೇಶನ ಹಂಚಿಕೆಯಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಕಾನೂನು ಬಾಹಿರ ಕೆಲಸವಾಗಿದೆ. ಮುಡಾ ಹಗರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ ಬಳಿಕವೂ ರಾಜ್ಯಪಾಲರು ಅನುಮತಿ ನೀಡಿರುವುದು ರಾಜಕೀಯ ದುರುದ್ದೇಶಪೂರಿತ ಎಂದು ಆಕ್ರೋಶ ವ್ಯಕ್ತಪಡಿಸಿದರು.ತಮ್ಮ ಸುದೀರ್ಘ ನಾಲ್ಕು ದಶಕಗಳ ರಾಜಕೀಯ ಜೀವನದಲ್ಲಿ ಯಾವುದೇ ಕಳಂಕವಿಲ್ಲದೇ ರಾಜಕಾರಣ ಮಾಡಿಕೊಂಡು ಸರ್ಕಾರದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿಗಳ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ವಿರೋಧ ಪಕ್ಷಗಳು ಪಾದಯಾತ್ರೆ ಹಮ್ಮಿಕೊಂಡಿದ್ದವು. ಜತೆಗೆ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರ ಮೇಲೆ ಒತ್ತಡ ಹೇರಿ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿದೆ. ಇದು ಸೇಡಿನ ರಾಜಕಾರಣವಾಗಿದೆ ಎಂದು ಆರೋಪಿಸಿದರು.ನ್ಯಾಯಾಲಯದಿಂದಲೇ ಛೀಮಾರಿ ಹಾಕಿಸಿಕೊಂಡ ವ್ಯಕ್ತಿಯೊಬ್ಬ ನೀಡಿರುವ ದೂರನ್ನು ಆಧರಿಸಿ ಸಿಎಂ ಅವರಿಗೆ ರಾತ್ರೋರಾತ್ರಿ ನೋಟೀಸ್ ಜಾರಿಗೊಳಿಸಿ ಈಗ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರು ಪೂರ್ವಾಗ್ರಹ ಪೀಡಿತರಾಗಿ ಬಿಜೆಪಿಯ ಏಜೆಂಟರಂತೆ ವರ್ತಿಸುತ್ತಿದ್ದಾರೆ.
ರಾಜ್ಯಪಾಲರಾಗಿ ಒಂದು ಕ್ಷಣವೂ ಮುಂದುವರಿಯುವ ನೈತಿಕತೆ ಅವರಿಗಿಲ್ಲ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರಾಜಕೀಯ ಪಕ್ಷಗಳ ಹಿತಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಅವರನ್ನು ರಾಷ್ಟ್ರಪತಿಗಳು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.ವಿಳಂಬ ನೀತಿ ಅನುಸರಿಸಿದರೆ ಯಾವುದೇ ಹಂತದ ಹೋರಾಟಕ್ಕೆ ಇಳಿಯಲು ಮೀನಮೇಷ ಎಣಿಸುವುದಿಲ್ಲ ಎಂದು ಗುಡುಗಿದರು.
ಮನವಿ ನೀಡುವ ವೇಳೆ, ಕರಿಯಪ್ಪ ಬಳೂಟಗಿ, ಯಲ್ಲಪ್ಪಗೌಡ್ರ ಅಣ್ಣಿಗೇರಿ, ಬಸಪ್ಪ ಜಾಲವಾಡಗಿ, ಸಣ್ಣಪ್ಪ ವಾಲೀಕಾರ, ಎಚ್.ಎಚ್. ಹಾಲಪ್ಪನವರ, ಸಿ.ಎಸ್. ಜೋಗೇರ, ಈರಣ್ಣ ಕೋಟಿ, ದೇವಪ್ಪ ಇಟ್ಟೇಕಾರ, ತಿಪ್ಪಣ್ಣ ಕುಳಗೇರಿ, ಎಸ್.ಆರ್. ಕಟ್ಟೇಕಾರ, ರಮೇಶ, ಕಾರ್ತಿಕ ಸೇರಿ ಅನೇಕರು ಇದ್ದರು.