ಗೌರಿಬಿದನೂರು: ತಾಲೂಕಿನಲ್ಲಿ ಕೃಷಿ ಚಟುವಟಿಕೆಗೆ ಅಸಮರ್ಪಕ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಆರೋಪಿಸಿ, ಡಿ ಪಾಳ್ಯ ಬೆಸ್ಕಾಂ ಕಚೇರಿ ಎದುರು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿ, ತಾಲೂಕಿನಲ್ಲಿ ರೈತರಿಗೆ ಬೆಳಗ್ಗೆ ನೀಡಬೇಕಾದ 7 ಗಂಟೆ ಮತ್ತು ರಾತ್ರಿ ವೇಳೆಯ 3 ಗಂಟೆಯ ವಿದ್ಯುತ್ ಅನ್ನು ನೀಡದೆ ಬೆಸ್ಕಾಂ ಅಧಿಕಾರಿಗಳು ರೈತರನ್ನು ವಂಚಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆಪರೀಕ್ಷಾ ಸಮಯವಾಗಿರುವುದರಿಂದ ಸಮರ್ಪಕ ವಿದ್ಯುತ್ ನೀಡದೇ ಇರುವುದರಿಂದ ದೀಪಗಳ ಬೆಳಕಿನಲ್ಲಿ ಓದುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕೂಡಲೇ ಅಧಿಕಾರಿಗಳು ರೈತರಿಗೆ ಅಡೆತಡೆ ಇಲ್ಲದೇ, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ಗುಂಡಿಬಂಡೆ ಬೆಸ್ಕಾಂ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಸಹಾಯಕ ಕಾರ್ಯಪಾಲಕ ಅಭಿಯಂತರ ವಿಶ್ವಾಸ್, ಸಮಸ್ಯೆಯನ್ನು ಬಗೆಹರಿಸಲು ಮೇಲಧಿಕಾರಿಗಳಿಗೆ ಮನವಿ ತಲುಪಿಸಲಾಗುವುದು ಎಂದು ಹೇಳಿದರು.ಪ್ರಮುಖರಾದ ನರಸಿಂಹಮೂರ್ತಿ, ಶ್ರೀನಿವಾಸ್, ಸನತ್ ಕುಮಾರ್, ಮುನಿ ವೆಂಕಟಪ್ಪ, ಬಾಬು, ಗೋಪಿ, ಲಕ್ಷ್ಮೀ ನಾರಾಯಣ, ನಾರಾಯಣ ರೆಡ್ಡಿ, ನರಸಿಂಹ ರೆಡ್ಡಿ ಅವಲಪ್ಪ ಇತರರಿದ್ದರು.