ಹಾಲಿನ ಬಾಕಿ ಪ್ರೋತ್ಸಾಹಧನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

| Published : Feb 07 2024, 01:45 AM IST

ಹಾಲಿನ ಬಾಕಿ ಪ್ರೋತ್ಸಾಹಧನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಘೋಷಣೆ ಕೂಗಿ ಆಕ್ರೋಶ. ರಾಯಚೂರಿನ ಡಿಸಿ ಕಚೇರಿ ಮುಂದೆ ಬಿಜೆಪಿ ನಗರ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಹಾಲು ಉತ್ಪಾದಕರ ಬಾಕಿ ಪ್ರೋತ್ಸಾಹಧನ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ನಗರ ಮೋರ್ಚಾದ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮುಖಾಂತರ ಆಗಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು, ರಾಜ್ಯದ ಕಾಂಗ್ರೆಸ್ ಸರ್ಕಾರ ರೈತ, ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಘೋಷಣೆ ಹಾಕಿದರು.

ಕಾಂಗ್ರೆಸ್‌ ತನ್ನ 8 ತಿಂಗಳ ಅಧಿಕಾರಿ ಅವಧಿಯಲ್ಲಿ ಹಾಲು ಉತ್ಪಾದಕರ ಸಂಘದ 716 ಕೋಟಿ ರು. ಹಣ ಬಾಕಿ ಉಳಿಸಿಕೊಂಡಿದೆ. ಭೀಕರ ಬರಗಾಲವನ್ನು ಎದುರಿಸುತ್ತಿದೆ. ರೈತರು ಸಂಕಷ್ಟದ ಸಮಯದಲ್ಲಿ ಹಾಲು ಉತ್ಪಾದಕರಿಗೆ ನೀಡಬೇಕಾದಂತಹ ಪ್ರೋತ್ಸಾಹದ ಮೊತ್ತವನ್ನು ಸರ್ಕಾರ ಐದು ತಿಂಗಳ ಬಾಕಿ ಉಳಿಸಿಕೊಂಡಿರುವುದು ಖಂಡನೀಯ ವಿಷಯವಾಗಿದೆ ಎಂದು ಕಿಡಿಕಾರಿದರು.

ಸರ್ಕಾರ ಹಾಲು ಉತ್ಪಾದಕರ ಪ್ರೋತ್ಸಾಹ ಧನ ಬಾಕಿ ಉಳಿಸಿಕೊಂಡಿದ್ದರಿಂದ ಹಾಲು ಉತ್ಪಾದನೆ ಕುಂಠಿತಗೊಂಡಿದೆ. ಇಷ್ಟು ದಿನ ಪ್ರತಿ ನಿತ್ಯ 26 ಲಕ್ಷ ರೈತರಿಂದ 85 ಲಕ್ಷ ಲೀ. ಹಾಲು ಸಂಗ್ರಹವಾಗುತ್ತಿತ್ತು. ಇದೀಗ 716 ಕೋಟಿ ರು. ಬಾಕಿ ಉಳಿಸಿಕೊಂಡಿದ್ದರಿಂದ ಸುಮಾರು 10 ಲಕ್ಷ ಲೀ. ಹಾಲು ಸಂಗ್ರಹ ಕಡಿಮೆ ಆಗಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಎಂಎಲ್ಸಿ ಎನ್.ಶಂಕರಪ್ಪ, ಆರ್‌ಡಿಎ ಮಾಜಿ ಅಧ್ಯಕ್ಷರಾದ ಬಿ.ಗೋವಿಂದ, ರಾಜಕುಮಾರ, ಮುಖಂಡರಾದ ತಿಮ್ಮಪ್ಪ ಫಿರಂಗಿ, ಬಂಡೇಶ ವಲ್ಕಂದಿನ್ನಿ, ಗಿರೀಶ ಕನಕವೀಡು, ಮಹೇಂದ್ರ ರೆಡ್ಡಿ, ರಾಮಚಂದ್ರ ಕಡಗೋಲ,ಶರಣಮ್ಮ ಕಾಮರೆಡ್ಡಿ, ರಾಜೇಶ್ವರಿ ಗೋಪಿಶೆಟ್ಟಿ, ಸುಲೋಚನಾ, ಸಂಗೀತ, ವೀರೇಶ, ಶಂಶಾಲಂ ಸೇರಿ ಕಾರ್ಯಕರ್ತರು ಇದ್ದರು.