ಸಾರಾಂಶ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜನ್ಮದಿನಕ್ಕೆ ನಗರದಲ್ಲಿ ಬ್ಯಾನರ್‌ಗಳನ್ನು ಹಾಕಲು ಪಾಲಿಕೆ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಕಾರ್ಯಕರ್ತರು ಪಾಲಿಕೆ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಜನ್ಮದಿನಕ್ಕೆ ನಗರದಲ್ಲಿ ಬ್ಯಾನರ್‌ಗಳನ್ನು ಹಾಕಲು ಪಾಲಿಕೆ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿ ಕಲ್ಯಾಣ ಕರ್ನಾಟಕ ಪ್ರಗತಿ ಪಕ್ಷದ ಕಾರ್ಯಕರ್ತರು ಪಾಲಿಕೆ ಆಯುಕ್ತರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜ. 11ರಂದು ಜನಾರ್ದನ ರೆಡ್ಡಿಯವರ ಜನ್ಮದಿನಕ್ಕೆ ನಗರದಲ್ಲಿ ಬ್ಯಾನರ್ ಹಾಗೂ ಬಂಟಿಂಗ್ಸ್ ಹಾಕಲು ಪಾಲಿಕೆಗೆ ಶುಲ್ಕ ಕಟ್ಟಿ ಅನುಮತಿ ಪಡೆಯಲು ಕೋರಲಾಗಿದ್ದು, ಅನುಮತಿ ನೀಡಲು ನಿರಾಕರಿಸಲಾಗಿದೆ ಎಂದು ಪಕ್ಷದ ಮುಖಂಡರು ದೂರಿದರು.ಈ ಹಿಂದೆ ಕೆಲ ರಾಜಕೀಯ ನಾಯಕರ ಜನ್ಮದಿನಕ್ಕೆ ಬಳ್ಳಾರಿ ತುಂಬಾ ಬ್ಯಾನರ್, ಕಟೌಟ್‌ಗಳನ್ನು ನಿರ್ಮಿಸಲಾಗಿದೆ. ಆಗ ಅನುಮತಿ ನೀಡಿದ್ದು, ಈಗ ನಮಗೆ ಕೊಡದಿರುವ ಉದ್ದೇಶ ಏನು? ಎಂದು ಪ್ರಶ್ನಿಸಿದರು. ಪಾಲಿಕೆ ಆಯುಕ್ತರನ್ನು ಭೇಟಿ ಮಾಡಿದ ಪಕ್ಷದ ಮುಖಂಡರು, ಅನುಮತಿ ನೀಡುವುದಾಗಿ ಹೇಳಿ ಇದೀಗ ನಿರಾಕರಿಸುವುದು ಸರಿಯಲ್ಲ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ದಮ್ಮೂರು ಶೇಖರ್ ಮಾತನಾಡಿ, ಕಾನೂನು ಪ್ರಕಾರವಾಗಿ ನಮಗೆ ಬ್ಯಾನರ್ ಹಾಕಲು ಅನುಮತಿ ನೀಡಬೇಕು. ಇಲ್ಲವಾದರೆ ನ್ಯಾಯಾಲಯ ಮೊರೆ ಹೋಗಲಾಗುವುದು ಎಂದು ಪಾಲಿಕೆ ಆಯುಕ್ತರಿಗೆ ತಿಳಿಸಿದರಲ್ಲದೆ, ಆಡಳಿತ ಪಕ್ಷದ ಕೈಗೊಂಬೆಯಾಗಿ ಕಾರ್ಯನಿರ್ವಹಿಸುತ್ತಿದ್ದೀರಿ ಎಂದು ದೂರಿದರು.ಸ್ಥಳಕ್ಕೆ ಆಗಮಿಸಿದ ಗಾಂಧಿನಗರ ಪೊಲೀಸರು ಹಾಗೂ ಪಕ್ಷದ ನಾಯಕರ ಜತೆ ವಾಗ್ವಾದ ನಡೆಯಿತು. ಕೊನೆಗೆ ನಗರದ ವಿವಿಧೆಡೆ ಬ್ಯಾನರ್ ಅಳವಡಿಕೆಗೆ ಅನುಮತಿ ನೀಡಲಾಯಿತು. ಪಕ್ಷದ ಮುಖಂಡರಾದ ವೆಂಕಟರಮಣ, ಮಲ್ಲಿಕಾರ್ಜುನ ಆಚಾರ್, ಕೊಳಗಲ್ ಅಂಜಿನಿ, ಸುನಿಲ್ ರೆಡ್ಡಿ, ಮುನ್ನಾಬಾಯಿ ಸೇರಿದಂತೆ ಕೆಆರ್‌ಪಿಪಿ ಕಾರ್ಯಕರ್ತರಿದ್ದರು.