ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆಕನ್ನಡ ಭಾಷೆಯ ಅರಿವು ಇರದ ಹಾಗೂ ಬ್ಯಾಂಕಿಗೆ ಬರುವ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಮತ್ತು ರೈತಾಪಿ ವರ್ಗದವರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳದ ಬ್ಯಾಂಕ್ ಸಿಬ್ಬಂದಿ ವರ್ಗವನ್ನ ಇಲ್ಲಿಂದ ವರ್ಗಾಯಿಸಬೇಕು ಎಂದು ಒತ್ತಾಯಿಸಿ ಕರವೇ, ರೈತ ಸಂಘದ ವತಿಯಿಂದ ಬ್ಯಾಂಕ್ ಮುಂದೆ ಧರಣಿ ಪ್ರತಿಭಟನೆ ನಡೆಸಲಾಯಿತು.
ತಾಲೂಕು ಕರವೇ ಅಧ್ಯಕ್ಷ ಹೇಮಂತ್ ಕುಮಾರ್, ಜಿಲ್ಲಾ ರೈತ ಸಂಘದ ಸಂಚಾಲಕ ಬೋರನ ಕೊಪ್ಪಲು ಶಿವಲಿಂಗಪ್ಪ ಅವರ ನೇತೃತ್ವದಲ್ಲಿ ಹಾರನಹಳ್ಳಿ ಯೂನಿಯನ್ ಬ್ಯಾಂಕ್ ಶಾಖೆ ಮುಂದೆ ಸೇರಿದ ಪ್ರತಿಭಟನಾಕಾರರು ಬ್ಯಾಂಕ್ ಸಿಬ್ಬಂದಿಯ ವಿರುದ್ಧ ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಹೇಮಂತ್ ಕುಮಾರ್ ಮಾತನಾಡಿ, ಸ್ಥಳೀಯ ಯೂನಿಯನ್ ಬ್ಯಾಂಕ್ ಗ್ರಾಮೀಣ ಪ್ರದೇಶದಲ್ಲಿರುವುದರಿಂದ ಹಾರನಹಳ್ಳಿ ಸೇರಿದಂತೆ ಈ ಭಾಗದಲ್ಲಿ ಬರುವ ಸುತ್ತ ಹತ್ತಾರು ಹಳ್ಳಿಗಳ ರೈತರು ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಮಹಿಳೆಯರು ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದಾರೆ. ಆದರೆ ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕನ್ನಡ ಬರುವುದಿಲ್ಲ ಮತ್ತು ಬ್ಯಾಂಕಿಗೆ ಬರುವ ಗ್ರಾಹಕರೊಂದಿಗೆ ಸೌಜನ್ಯವಾಗಿ ನಡೆದುಕೊಳ್ಳುವ ಮನೋಭಾವವು ಇಲ್ಲ. ಇದರಿಂದ ಗ್ರಾಹಕರು ತೊಂದರೆ ಅನುಭವಿಸುವಂತಾಗಿದೆ. ಕನ್ನಡ ಬಾರದ ಹಾಗೂ ಗ್ರಾಹಕರೊಂದಿಗೆ ಸೌಜನ್ಯದಿಂದ ನಡೆದುಕೊಳ್ಳದ ಇಂತಹ ಸಿಬ್ಬಂದಿ ವರ್ಗದಿಂದ ಜನತೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಬ್ಯಾಂಕ್‌ನ ಮುಖ್ಯಸ್ಥರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳದೆ ಹೋದರೆ ಅರಸೀಕೆರೆ ಯೂನಿಯನ್ ಬ್ಯಾಂಕ್ ಮುಂದೆ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರೈತ ಮುಖಂಡ ಬೋರನ ಕೊಪ್ಪಲು ಶಿವಲಿಂಗಪ್ಪ ಮಾತನಾಡಿ, ಮಳೆ ಬೆಳೆ ಇಲ್ಲದೆ ಮೊದಲೇ ಸಂಕಷ್ಟದಲ್ಲಿರುವ ರೈತರು ಬ್ಯಾಂಕ್‌ನಲ್ಲಿ ಪಡೆದಿರುವ ಸಾಲವನ್ನು ಹಿಂತಿರುಗಿಸುವಂತೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಮತ್ತೆ ಕೆಲ ರೈತರು ತಾವು ಪಡೆದ ಸಾಲವನ್ನು ತೀರಿಸಿದ್ದರು. ಹೊಸದಾಗಿ ಸಾಲ ನೀಡದೆ ಸರ್ವಾಧಿಕಾರಿಗಳಂತೆ ಬ್ಯಾಂಕ್ ಸಿಬ್ಬಂದಿ ನಡೆದುಕೊಳ್ಳುತ್ತಿರುವುದರಿಂದ ರೈತರು ತೊಂದರೆ ಅನುಭವಿಸಲು ಕಾರಣವಾಗಿದೆ ಬ್ಯಾಂಕ್ ಅಧಿಕಾರಿಗಳ ದುರ್ವರ್ತನೆ ಇದೇ ರೀತಿ ಮುಂದುವರೆದರೆ ಅದರ ಪರಿಣಾಮವನ್ನು ಬ್ಯಾಂಕ್ ಎದುರಿಸಬೇಕಾಗುತ್ತದೆ ಎಂದರು.ಪ್ರತಿಭಟನೆಯಲ್ಲಿ ತಾಲೂಕು ಕರವೇ ಮಹಿಳಾ ಘಟಕದ ಅಧ್ಯಕ್ಷೆ, ಕಮಲಮ್ಮ ಗ್ರಾಮ ಪಂಚಾಯತಿ ಸದಸ್ಯರಾದ ಶಿವಕುಮಾರ್, ನಾಗರಾಜು, ದೇವರಾಜು, ಮಲ್ಲೇಶ್ ನಾಯ್ಕ, ಉಮಾ, ಸಿದ್ದೇಶ್ ಸೇರಿದಂತೆ ಮತ್ತು ಇತರರು ಪಾಲ್ಗೊಂಡಿದ್ದರು.