ನೀರಿಗಾಗಿ ಖಾಲಿ ಕೊಡ ಹಿಡಿದು ಪ್ರತಿಭಟನೆ

| Published : Jan 19 2024, 01:46 AM IST

ಸಾರಾಂಶ

ಕನಕಪುರ: ಕಳೆದ ಐದಾರು ತಿಂಗಳಿಂದ ಕುಡಿಯುವ ನೀರಿಲ್ಲದೆ ನಗರದ 31ನೇ ವಾರ್ಡ್ ಮೆಳೆಕೋಟೆ ಕಾಲೋನಿಯ ಜನತೆ ತತ್ತರಿಸಿ ಹೋಗಿದ್ದಾರೆಂದು ಆರೋಪಿಸಿ ಮಹಿಳೆಯರು ಖಾಲಿ ಕೊಡ ಹಿಡಿದು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ಕನಕಪುರ: ಕಳೆದ ಐದಾರು ತಿಂಗಳಿಂದ ಕುಡಿಯುವ ನೀರಿಲ್ಲದೆ ನಗರದ 31ನೇ ವಾರ್ಡ್ ಮೆಳೆಕೋಟೆ ಕಾಲೋನಿಯ ಜನತೆ ತತ್ತರಿಸಿ ಹೋಗಿದ್ದಾರೆಂದು ಆರೋಪಿಸಿ ಮಹಿಳೆಯರು ಖಾಲಿ ಕೊಡ ಹಿಡಿದು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು.

ನಗರಸಭೆ ಮುಂದೆ ಜಮಾವಣೆಗೊಂಡ ಮಹಿಳೆಯರು ಮತ್ತು ನಿವಾಸಿಗಳು ನಗರಸಭಾ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕಾಲೋನಿಯ ಶೋಭಾ, ಪವಿತ್ರ ಮಾತನಾಡಿ, ಕಳೆದ ಐದು ತಿಂಗಳಿಂದ ಮೆಳೆಕೋಟೆ ಕಾಲೋನಿಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಜೊತೆಗೆ ನಾಲ್ಕು ಬೀದಿಗಳಲ್ಲಿ ಬೀದಿದೀಪಗಳಿಲ್ಲದೆ ಕತ್ತಲಲ್ಲಿ ವಾಸಿಸುತ್ತಿದ್ದೇವೆ, ಸ್ಥಳೀಯ ನಗರ ಸಭಾ ಸದಸ್ಯೆ ಶೋಭಾ ಪ್ರಕಾಶ್ ಹಾಗೂ ನಗರಸಭೆ ಅಧಿಕಾರಿಗಳಿಗೆ ಲಿಖಿತ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.

ನಾಲ್ಕು ದಿನಗಳಿಗೊಮ್ಮೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುತ್ತಿದ್ದಾರೆ. ಇದು ನಮಗೆ ಸಾಕಾಗುತ್ತಿಲ್ಲ. ನಗರಸಭೆ ಅಧಿಕಾರಿಗಳು ಕೂಡಲೆ ಇಲ್ಲಿನ ಸಮಸ್ಯೆಯನ್ನು ಬಗೆಹರಿಸಿ ಕುಡಿಯುವ ನೀರು ಮತ್ತು ವಿದ್ಯುತ್ ದೀಪಗಳನ್ನು ಸಮರ್ಪಕವಾಗಿ ನೀಡದಿದ್ದರೆ ಮತ್ತೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಶೀಘ್ರವೇ ಪರಿಹಾರ: ಸ್ಥಳಕ್ಕಾಗಮಿಸಿದ ನಗರಸಭಾ ಇಂಜಿನಿಯರ್‌ಗಳಾದ ರಾಘವೇಂದ್ರ ಹಾಗೂ ವಿಜಯಕುಮಾರ್ ಮಹಿಳೆಯರನ್ನು ಸಮಾಧಾನಪಡಿಸಿ ಈಗಾಗಲೇ ನಿಮ್ಮ ಭಾಗದಲ್ಲಿ ಎರಡು ಕೊಳವೆಬಾವಿ ಸಂಪೂರ್ಣ ಬತ್ತಿಹೋಗಿದೆ. ಅದಕ್ಕೆ ಪರ್ಯಾಯವಾಗಿ ಮತ್ತೊಂದು ಕೊಳವೆಬಾವಿ ಕೊರೆಸಲಾಗಿದೆ. ಕೂಡಲೆ ಸ್ಥಳ ಪರಿಶೀಲಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಭಟನೆಯಲ್ಲಿ ಲಕ್ಷ್ಮೀದೇವಮ್ಮ, ಮುತ್ತಮ್ಮ, ಆಶಾ, ಪುಟ್ಟಮ್ಮ, ನಿರ್ಮಲ, ವೆಂಕಟಲಕ್ಷ್ಮಮ್ಮ ಇತರರು ಪಾಲ್ಗೊಂಡಿದ್ದರು.