ರಾಜ್ಯದಲ್ಲಿ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಸರ್ಕಾರವು ನೀರು ಹರಿಸುವಂತೆ ಆದೇಶಿಸುತ್ತಿರುವ ನಿರ್ವಹಣಾ ಮಂಡಳಿ ತೀರ್ಮಾನ ಧಿಕ್ಕರಿಸಿ ಹೊರ ಬರಬೇಕು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಸುಳ್ಳು ಹೇಳುತ್ತಿದೆ. ತಕ್ಷಣ ನೀರು ನಿಲ್ಲಿಸುವಂತೆ ಆಗ್ರಹಿಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನಿತ್ಯ 12 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹರಿಸುತ್ತಿರುವುದನ್ನು ಖಂಡಿಸಿ ಭೂಮಿ ತಾಯಿ ಹೋರಾಟ ಸಮಿತಿ ರೈತ ಸದಸ್ಯರು ಕಾವೇರಿ ನದಿಗಿಳಿದು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಸ್ನಾನಘಟ್ಟದ ಬಳಿ ಸಮಿತಿ ಹಿರಿಯ ಮುಖಂಡ ಕೆ. ಎಸ್.ನಂಜುಂಡೇಗೌಡ ಹಾಗೂ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ರೈತ ಕಾರ್ಯಕರ್ತರು ಕಾವೇರಿ ನದಿಗಿಳಿದು ಪ್ರಾಧಿಕಾರಗಳು ಹಾಗೂ ರಾಜ್ಯ ಸರ್ಕಾರ, ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರ ವಿರುದ್ಧ ಘೋಷಣೆ ಕೂಗಿದರು.

ನಂತರ ಕೆ.ಎಸ್. ನಂಜುಂಡೇಗೌಡ ಮಾತನಾಡಿ, ರಾಜ್ಯ ಸರ್ಕಾರ ಕೆಆರ್ ಎಸ್ ನಿಂದ ಪ್ರತಿನಿತ್ಯ 12 ಸಾವಿರ ಕ್ಯುಸೆಕ್‌ಗೂ ಅಧಿಕ ನೀರನ್ನು ಹರಿಸುತ್ತಿದ್ದು, ಜಿಲ್ಲೆ ಹಾಗೂ ನಾಡಿನ ರೈತರಿಗೆ ವಿಷ ಉಣಿಸಿದಂತಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರ ಕೃಷಿಗೆ ನಾಲ್ಕು ಕಟ್ಟು ನೀರು ಕೊಡುವುದಾಗಿ ಭರವಸೆ ನೀಡಿತ್ತು. ಇದನ್ನು ನಂಬಿ ರೈತರು ಭತ್ತ ನಾಟಿ ಮಾಡುತ್ತಿದ್ದಾರೆ. ಆದರೆ ಸರ್ಕಾರ ತಮಿಳುನಾಡಿಗೆ ನೀರು ಹರಿಸುವ ಮೂಲಕ ಅಣೆಕಟ್ಟೆಯನ್ನು ಬರಿದು ಮಾಡುತ್ತಿದೆ. ಹೀಗಾಗಿ ಸ್ಥಳೀಯ ನಾಲೆಗಳಿಗೆ ನೀರು ಹರಿಸಿ ರೈತರನ್ನು ರಕ್ಷಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ರಾಜ್ಯದ ಬರ ಪರಿಸ್ಥಿತಿ ಬಗ್ಗೆ ಪ್ರಾಧಿಕಾರ ಅಥವಾ ಸುಪ್ರೀಂಕೋರ್ಟ್‌ಗೆ ಸರಿಯಾಗಿ ಮನವರಿಕೆ ಮಾಡಿಕೊಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿರುವ ಕಾರಣ ಅಣೆಕಟ್ಟೆಯಿಂದ ತಮಿಳುನಾಡಿಗೆ ನೀರು ಬಿಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಬಿ.ಸಿ ಕೃಷ್ಣೇಗೌಡ ಮಾತನಾಡಿ, ಈಗಾಗಲೇ ಕಬಿನಿ ಜಲಾಶಯ ಸಂಪೂರ್ಣ ಖಾಲಿಯಾಗಿದೆ. ದಿನಕ್ಕೆ ಕಾವೇರಿ ನದಿ ನೀರು ಹೆಚ್ಚಳವಾಗುತ್ತಿದ್ದು, ಕನಿಷ್ಠ 12 ಸಾವಿರ ಕ್ಯೂಸೆಕ್ ಅಧಿಕ ನೀರು ತಮಿಳುನಾಡಿಗೆ ಹರಿದು ಹೋಗುತ್ತಿದೆ. ಇದೀಗ ಕೆಆರ್‌ಎಸ್ ಅಣೆಕಟ್ಟೆಯನ್ನು ಖಾಲಿ ಮಾಡಲು ಸರ್ಕಾರ ಮುಂದಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಮಳೆ ಇಲ್ಲದೆ ಬರದ ಛಾಯೆ ಆವರಿಸಿದೆ. ಸರ್ಕಾರವು ನೀರು ಹರಿಸುವಂತೆ ಆದೇಶಿಸುತ್ತಿರುವ ನಿರ್ವಹಣಾ ಮಂಡಳಿ ತೀರ್ಮಾನ ಧಿಕ್ಕರಿಸಿ ಹೊರ ಬರಬೇಕು. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವುದಾಗಿ ಸುಳ್ಳು ಹೇಳುತ್ತಿದೆ. ತಕ್ಷಣ ನೀರು ನಿಲ್ಲಿಸುವಂತೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ರವಿಲಕ್ಷ್ಮಣ, ಮಂಜುನಾಥ್ ಡಿ., ಬಲ್ಲೇನಹಳ್ಳಿ ಸುನೀಲ್, ರಾಮಚಂದ್ರ, ಕೆಂಪೇಗೌಡ, ಅಚ್ಚಪ್ಪನಕೊಪ್ಪಲು ಕೃಷ್, ಕಡತನಾಳು ಚಾಮರಾಜು, ದೊಡ್ಡೇಗೌಡನಕೊಪ್ಪಲು ರವಿ, ಮಹೇಶ, ಬಲ್ಲೇನಹಳ್ಳಿ ಮಹೇಶ, ರಾಮಕೃಷ್ಣ, ಮೇಳಾಪುರ ದೇವರಾಜು, ಬಾಲು, ಕೂಡಲಕುಪ್ಪೆ ಸ್ವಾಮಿಗೌಡ, ಪುಟ್ಟಣ್ಣ, ದಿನೇಶ್, ಸ್ವಾಮಿ ಸೇರಿ ಇತರೆ ಮುಖಂಡರು ಭಾಗವಹಿಸಿದ್ದರು.