ಸಾರಾಂಶ
ತಾಲೂಕಿನ ಚಳಗೇರಿ ಟೋಲ್‌ನಾಕಾದಲ್ಲಿ ಸರ್ವೀಸ್ ರಸ್ತೆ, ಶೌಚಗೃಹ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕು.
ಟೋಲ್ ವ್ಯವಸ್ಥಾಪಕ ವಿಕಾಸ ಶರ್ಮಾಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರ ಮನವಿ
ಮಾ. ೧೧ರಂದು ಟೋಲ್‌ನಾಕಾ ಬಳಿ ಪ್ರತಿಭಟನೆಯ ಎಚ್ಚರಿಕೆಕನ್ನಡಪ್ರಭ ವಾರ್ತೆ ರಾಣಿಬೆನ್ನೂರುತಾಲೂಕಿನ ಚಳಗೇರಿ ಟೋಲ್‌ನಾಕಾದಲ್ಲಿ ಸರ್ವೀಸ್ ರಸ್ತೆ, ಶೌಚಗೃಹ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದರೆ ಮಾ. ೧೧ರಂದು ಟೋಲ್‌ನಾಕಾ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಟೋಲ್‌ನ ವ್ಯವಸ್ಥಾಪಕ ವಿಕಾಸ ಶರ್ಮಾಗೆ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಚಳಗೇರಿ ಟೋಲ್ ಆರಂಭಗೊಂಡು ೧೩ ವರ್ಷ ಕಳೆಯುತ್ತಾ ಬಂದಿದೆ. ಆದರೆ, ಈವರೆಗೂ ರೈತರಿಗೆ ಅವಶ್ಯವಿರುವ ಸರ್ವಿಸ್ ರಸ್ತೆ, ವಾಹನ ಸವಾರರಿಗೆ ಶೌಚಗೃಹ, ರಾತ್ರಿ ವೇಳೆ ವಿದ್ಯುತ್ ವ್ಯವಸ್ಥೆ ಹಾಗೂ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡದೆ ಇರುವುದು ಖಂಡನೀಯ.ಈಗಾಗಲೇ ಎಷ್ಟೋ ಜನ ಟೆಂಡರ್ ಪಡೆದು ದುಡಿಮೆ ಮಾಡಿಕೊಂಡು ಹೋಗಿದ್ದಾರೆ. ಆದರೆ, ಯಾರೋಬ್ಬರು ಟೋಲ್‌ನಾಕಾದಲ್ಲಿ ಇರಬೇಕಾದ ಸೌಲಭ್ಯಗಳನ್ನು ಒದಗಿಸಿಲ್ಲ. ಹೆದ್ದಾರಿ ಪ್ರಾಧಿಕಾರವೂ ಈ ಬಗ್ಗೆ ತಿರುಗಿ ನೋಡುತ್ತಿಲ್ಲ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಗುತ್ತಿಗೆದಾರರು ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲವಾದರೆ ಟೋಲ್ ಎದುರು ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಟೋಲ್‌ನಾಕಾದ ಅಸೋಸಿಯೇಷನ್ ಅಧ್ಯಕ್ಷ ಹನುಮಂತಪ್ಪ ಯಲ್ಲಕ್ಕನವರ, ಉಪಾಧ್ಯಕ್ಷ ಮಹೇಶ ನೀಲಪ್ಪನವರ, ಕಾರ್ಯದರ್ಶಿ ಕುಮಾರ ಮುದಿಗೌಡ್ರ, ಪ್ರಮುಖರಾದ ರಾಮಣ್ಣ ಉಕ್ಕಡಗಾತ್ರಿ, ವಾಗೀಶ ಸಾಲಿಮಠ, ದಿಳ್ಳೆಪ್ಪ ಸತ್ಯಪ್ಪನವರ, ಚಂದ್ರಣ್ಣ ಬೇಡರ, ನಾಗರಾಜ ಅರ್ಕಾಚಾರಿ, ಹರಿಹರಗೌಡ ಪಾಟೀಲ, ಯಲ್ಲಪ್ಪ ಓಲೇಕಾರ, ಭೀಮರಡ್ಡಿ ಹೊಸಳ್ಳಿ, ಮರಡೆಪ್ಪ ಚಳಗೇರಿ ಮತ್ತಿತರರು ಇದ್ದರು.