ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಸರ್ಕಾರ ಕೂಡಲೇ ನೈಜ ಸಮೀಕ್ಷೆ ನಡೆಸಿ ಪ್ರವಾಹದಿಂದ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಬೀದಿಗಳಿದು ರೈತರು ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ(ನಡಹಳ್ಳಿ) ಎಚ್ಚರಿಕೆಯ ಮನವಿ ಸಲ್ಲಿಸಿದರು. ರೈತರೊಂದಿಗೆ ಬೈಕ್ ರ್‍ಯಾಲಿ ಪಟ್ಟಣದ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಕೀರ್ತಿ ಚಾಲಕ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಿಗಿಂತ ವಿಜಯಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆಯಾಗಿ ಬೆಳೆ ಹಾನಿಯಾಗಿ ರೈತರು ಕಂಗಾಲಾಗಿದ್ದಾರೆ. ಮುದ್ದೇಬಿಹಾಳ, ತಾಳಿಕೋಟೆ ಹಾಗೂ ನಿಡಗುಂದಿ ತಾಲೂಕುಗಳ ವ್ಯಾಪ್ತಿಯಲ್ಲಿ 1.24 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಸಂಪೂರ್ಣ ನಷ್ಟವಾಗಿದೆ. ಅಧಿಕಾರಿಗಳು ಪ್ರತಿ ತಾಲೂಕಿನಲ್ಲಿ ಒಂದೆರಡು ಹಳ್ಳಿಗಳ ಸಂಪೂರ್ಣ ಸಮೀಕ್ಷೆ ನಡೆಸಿ ಹಾನಿಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳಬಹುದು. ಬೆಳೆಹಾನಿಯ ನೈಜತೆ ಮುಚ್ಚಿಟ್ಟು ಸಂಕಟದಲ್ಲಿರುವ ರೈತರ ಜೊತೆ ಚೆಲ್ಲಾಟವಾಡಬಾರದು ಎಂದು ಎಚ್ಚರಿಕೆ ನೀಡಿದರು.ಪ್ರತಿ ಗ್ರಾಮ, ಗ್ರಾಪಂ, ರೈತ ಸಂಪರ್ಕ ಕೇಂದ್ರಗಳಲ್ಲಿ ಬೆಳೆಹಾನಿಗೀಡಾದ ಎಲ್ಲಾ ರೈತರ ಪಟ್ಟಿ ಲಗತ್ತಿಸಬೇಕು. ಎಲ್ಲಿವರೆಗೆ ಈ ಬೇಡಿಕೆ ಈಡೇರುವುದಿಲ್ಲವೋ ಅಲ್ಲಿಯವರೆಗೆ ಹೋರಾಟ ಮಾಡಲು ಸಿದ್ಧರಾಗಿದ್ದೇವೆ. ಜಿಲ್ಲಾಧಿಕಾರಿಗಳು, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ತಾಲೂಕಾ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಬೇಡಿಕೆ ಈಡೇರಿಸದಿದ್ದಲ್ಲಿ ಅ.13 ರಿಂದ ಆಯಾ ಗ್ರಾಮ, ಗ್ರಾಪಂ, ಹೋಬಳಿ ಹಾಗೂ ತಾಲೂಕು ಕೇಂದ್ರಗಳ ಸರ್ಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ಮತ್ತು ಮುಖ್ಯ ರಸ್ತೆಗಳಲ್ಲಿ ರಸ್ತೆತಡೆ ನಡೆಸುವ ಮೂಲಕ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.ಈ ವೇಳೆ ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಮಲಕೇಂದ್ರಾಯಗೌಡ ಮುನ್ನಾಧಣಿ ನಾಡಗೌಡ, ಗಿರೀಶಗೌಡ ಪಾಟೀಲ, ಸೋಮನಗೌಡ ಬಿರಾದಾರ, ಸೋಮನಗೌಡ ಮೇಟಿ, ಗುರುನಾಥ ದೇಶಮುಖ, ಕೇಂಚಪ್ಪ ಬಿರಾದಾರ, ಸಂಜು ಬಾಗೇವಾಡಿ, ಮಂಜುನಾಥಗೌಡ ಪಾಟೀಲ, ಚೇತನ್ ಸಂಗಮ, ಶಂಕರಗೌಡ ಶಿವಣಗಿ, ಹುಲಗಪ್ಪ ಕಿಲಾರಟ್ಟಿ, ಸಂಗಣ್ಣ ಹತ್ತಿ, ಸುಭಾಸ ಕಟ್ಟಿಮನಿ, ಸಂಗಮೇಶ ಗುಂಡಕನಾಳ ಸೇರಿ ಇತರರು ಇದ್ದರು.