ಸಾರಾಂಶ
ಹುಬ್ಬಳ್ಳಿ: ನಿವೃತ್ತ ನೌಕರರಿಗೆ ಜುಲೈ 31ರೊಳಗೆ ಕನಿಷ್ಠ ಪಿಂಚಣಿ ಜಾರಿ ಮಾಡದಿದ್ದರೆ ಆಗಸ್ಟ್ 4 ಮತ್ತು 5ರಂದು ನವದೆಹಲಿಯ ಜಂತರ-ಮಂತರನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಇಪಿಎಸ್ ೯೫-ಎನ್‌ಎಸಿ ರಾಷ್ಟ್ರೀಯ ಅಧ್ಯಕ್ಷ, ಕಮಾಂಡರ್ ಅಶೋಕ ರಾವುತ್ ಹೇಳಿದರು.ಶನಿವಾರ ಇಲ್ಲಿನ ಲಿಂಗರಾಜನಗರದ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಇಪಿಎಸ್ ೯೫ ಎನ್‌ಎಸಿ ನಿವೃತ್ತ ಪಿಂಚಣಿದಾರರ ಸಮಾವೇಶದಲ್ಲಿ ಮಾತನಾಡಿದರು.
ನಿವೃತ್ತರಿಗೆ ಕನಿಷ್ಠ ಪಿಂಚಣಿಗೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಜು. ೩೧ರೊಳಗೆ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಬೃಹತ್ ಹೋರಾಟ ಮಾಡುವುದು ಅನಿವಾರ್ಯ ಎಂದರು.ಕನಿಷ್ಠ ಪಿಂಚಣಿಯನ್ನು ಮಾಸಿಕ ₹೭೫೦೦ಗೆ ಹೆಚ್ಚಳ, ಇಪಿಎಸ್ 95 ಸದಸ್ಯರಲ್ಲದವರಿಗೆ ₹5000 ಪಿಂಚಣಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಅಂತಿಮ ಗಡುವು ನೀಡಲಾಗಿದೆ. ದೆಹಲಿಯಲ್ಲಿ ನಡೆಯುವ ಬೃಹತ್ ಪ್ರತಿಭಟನೆಯಲ್ಲಿ ಧೈರ್ಯಗುಂದದೆ, ನಿರಾಶರಾಗದೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಹಕ್ಕು ಪಡೆದು ಕೊಳ್ಳೋಣ ಎಂದರು.
ಎನ್‌ಎಸಿ ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಮಾತನಾಡಿ, ನಿವೃತ್ತ ಪಿಂಚಣಿದಾರರು ನಮ್ಮ ಹಕ್ಕು ಪಡೆದುಕೊಳ್ಳಬೇಕು. ಅದಕ್ಕಾಗಿ ಹೋರಾಟ ಅನಿವಾರ್ಯ ಎಂದರು.ಇಪಿಎಸ್ ೯೫ ಎನ್‌ಎಸಿ ರಾಜ್ಯಾಧ್ಯಕ್ಷ ಜಿ.ಎಸ್.ಎಂ. ಸ್ವಾಮಿ, ಉಪಾಧ್ಯಕ್ಷ ಚನ್ನಬಸಯ್ಯ ಎನ್.ಎಂ., ಪ್ರಧಾನ ಕಾರ್ಯದರ್ಶಿ ಸಿ.ಎಸ್. ಮಂಜುನಾಥ, ವಿ.ಕೆ. ಗಡದ, ನಂಜುಂಡೇಗೌಡ, ಅನಿಲ ಇನಾಮದಾರ, ರವಿ ಕರೋಗಲ್ಲ ಇತರರು ಮಾತನಾಡಿದರು.
ಸಿ.ಕೆ. ಕೆರೂರ, ಎಂ. ಬೇವಿನಕಟ್ಟಿ, ಕೆ.ಜಿ. ಕುರಹಟ್ಟಿ, ಲಲಿತಾ, ಶಾಂತಿನಾಥ ಪಾಟೀಲ, ಹುಚ್ಚಪ್ಪನವರ, ಸಿ.ಕೆ. ಕಿರಣ ಹಾಗೂ ಇಪಿಎಸ್-೯೫ ಎನ್‌ಎಸಿ ಘಟಕದ ಹುಬ್ಬಳ್ಳಿ-ಧಾರವಾಡ, ಧಾರವಾಡ, ಹಾವೇರಿ, ಬೀದರ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳ ನಿವೃತ್ತ ಪಿಂಚಣಿದಾರರು ಪಾಲ್ಗೊಂಡಿದ್ದರು.