ಗೋಶಾಲೆಗೆ ಮೇವು ಪೂರೈಸದಿದ್ದರೆ ಧರಣಿ

| Published : May 12 2024, 01:18 AM IST

ಸಾರಾಂಶ

ಸಮರ್ಪಕವಾಗಿ ಗೋ ಶಾಲೆಗಳಿಗೆ ಮೇವು ಪೂರೈಕೆ ಮಾಡದಿದ್ದರೆ ಜಾನುವಾರುಗಳನ್ನು ತಹಸೀಲ್ದಾರ್ ‌ಕಚೇರಿ ಮುಂಭಾಗ ಕಟ್ಟಿಹಾಕಿ ಪ್ರತಿಭಟನೆ ಮಾಡುವುದಾಗಿ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಬೋಸ್ಕೋ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ಸಮರ್ಪಕವಾಗಿ ಗೋ ಶಾಲೆಗಳಿಗೆ ಮೇವು ಪೂರೈಕೆ ಮಾಡದಿದ್ದರೆ ಜಾನುವಾರುಗಳನ್ನು ತಹಸೀಲ್ದಾರ್ ‌ಕಚೇರಿ ಮುಂಭಾಗ ಕಟ್ಟಿಹಾಕಿ ಪ್ರತಿಭಟನೆ ಮಾಡುವುದಾಗಿ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಬೋಸ್ಕೋ ಎಚ್ಚರಿಕೆ ನೀಡಿದರು. ಹನೂರು ಪಟ್ಟಣದ ಆರ್‌ಎಂಸಿ ಆವರಣದಲ್ಲಿ ತಾಲೂಕು ಕಿಸಾನ್ ಸಂಘದ ವತಿಯಿಂದ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹನೂರು ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೆ ಪಟ್ಟಣದಲ್ಲಿ ಒಂದು ಮೇವು ನಿಧಿ ಸೇರಿ 16 ಗೋಶಾಲೆಗಳನ್ನು ತೆರೆಯಲಾಗಿದ್ದರೂ ಸಮರ್ಪಕ ಮೇವು ಸಿಗದೇ ಇರುವುದರಿಂದ, ಹಸಿವಿನಿಂದ ಜಾನುವಾರುಗಳು ಬಳಲುತ್ತಿವೆ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಇಲ್ಲಿಯ ತಹಸೀಲ್ದಾರ್ ಹಾಗೂ ಪಶುಪಾಲನೆ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಜಾನುವಾರುಗಳಿಗೆ ಮೇವು ಸರಿಯಾಗಿ ಸಿಗದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ದಿನಗಳಲ್ಲಿ ವರುಣನ ಕೃಪೆಯಿಂದ ಮಳೆಯಾಗುತ್ತಿದ್ದು ಜಿಲ್ಲಾಡಳಿತ ಇನ್ನು 20 ದಿನಗಳ ಕಾಲ ಮೇವು ನೀಡಿ ತದನಂತರ ನೀವು ನೀಡಿದರೂ ಕೂಡ‌ ನಮಗೆ ಅವಶ್ಯಕತೆ ಇರಲ್ಲ ಎಂದು ತಿಳಿಸಿದರು. ಸ್ಥಳೀಯ ಅಧಿಕಾರಿಗಳು ಗೋಶಾಲೆಯ ವಿಷಯದಲ್ಲಿ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಕ್ಕೂ ಕೂಡ ಪತ್ರ ಬರೆದು ಕ್ರಮಕ್ಕೆ ಆಗ್ರಹಿಸುತ್ತೇವೆ. ಇವರು ಜನತೆಗೆ ಮಾತ್ರ ವಂಚನೆ ಮಾಡುತ್ತಿಲ್ಲ ಮಾತು ಬಾರದ ಗೋ ಮಾತೆಗೆ ಕೂಡ ವಂಚನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರ ಎಚ್ಚೆತ್ತು ರಾಜ್ಯದಲ್ಲಿ ಹೆಚ್ಚು ದೇಶೀಯ ತಳಿ ಹೊಂದಿರುವಂತಹ ಹನೂರು ತಾಲೂಕಿಗೆ ವಿಶೇಷ ಪ್ರಾತಿನಿಧ್ಯ ನೀಡಿ ನಾಟಿ ಹಸುಗಳ ರಕ್ಷಣೆಗಾಗಿ ಯೋಜನೆ ರೂಪಿಸಿಬೇಕು ಎಂದರು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ವೆಂಕಟೇಶ್, ಗೋಪಾಲಕರಾದ ಮುತ್ತಯ್ಯ, ಶಿವರಾಮ್, ಇನ್ನಿತರರು ಹಾಜರಿದ್ದರು.