ಸಾರಾಂಶ
ಶನಿವಾರ ಬೆಳಗ್ಗೆ ಪುತ್ತೂರು- ಉಪ್ಪಿನಂಗಡಿ ರಸ್ತೆ ಕಾಮಗಾರಿ ಮತ್ತು ಉಪ್ಪಿನಂಗಡಿಯಲ್ಲಿ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದ ಅಶೋಕ್ ರೈ ಅವರು ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ಎತ್ತಿಕೊಂಡರು.
ಕನ್ನಡಪ್ರಭ ವಾರ್ತೆ ಪುತ್ತೂರು
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಿ.ಸಿ. ರೋಡ್‌ನಿಂದ ಅಡ್ಡಹೊಳೆಯವರೆಗೆ ನಡೆಯುತ್ತಿರುವ ರಸ್ತೆ ಅಗಲೀಕರಣ ಕಾಮಗಾರಿಯಲ್ಲಿ ಕಲ್ಲಡ್ಕದಿಂದ ಮಾಣಿಯವರೆಗೆ ಬಹಳಷ್ಟು ನಿಧಾನಗತಿಯಿಂದ ಕಾಮಗಾರಿ ನಡೆಯುತ್ತಿದೆ. ಫೆಬ್ರವರಿ ಅಂತ್ಯದ ಒಳಗಾಗಿ ಈ ಭಾಗದ ರಸ್ತೆ ಕಾಮಗಾರಿಯನ್ನು ಮುಗಿಸದಿದ್ದರೆ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಪುತ್ತೂರು ಶಾಸಕ ಅಶೋಕ್ ರೈ ಎಚ್ಚರಿಕೆ ನೀಡಿದ್ದಾರೆ.ಪುತ್ತೂರಿನಲ್ಲಿ ಶನಿವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮಾಣಿ ಭಾಗದಲ್ಲಿ ಮೂರ್ನಾಲ್ಕು ಕಾರ್ಮಿಕರಷ್ಟೇ ಕೆಲಸ ಮಾಡುತ್ತಿದ್ದಾರೆ. ಕೆಲಸ ಈ ರೀತಿ ಮುಂದುವರಿದರೆ ಇನ್ನೊಂದು ವರ್ಷ ಕಳೆದರೂ ಕಾಮಗಾರಿ ಮುಗಿಯದು. ಹೆದ್ದಾರಿ ಅಧಿಕಾರಿಗಳೊಂದಿಗೆ ಖುದ್ದಾಗಿ ಮಾತನಾಡಿದ್ದೇನೆ. ಫೆಬ್ರುವರಿ ಮಧ್ಯದೊಳಗೆ ಕಾಮಗಾರಿ ಮುಗಿಯುವ ಹಂತಕ್ಕೆ ಬರಬೇಕು. ಇಲ್ಲದಿದ್ದರೆ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದೇನೆ. ಒಂದೂವರೆ ತಿಂಗಳ ಒಳಗೆ ಕೆಲಸ ಮುಗಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು. ಶನಿವಾರ ಬೆಳಗ್ಗೆ ಪುತ್ತೂರು- ಉಪ್ಪಿನಂಗಡಿ ರಸ್ತೆ ಕಾಮಗಾರಿ ಮತ್ತು ಉಪ್ಪಿನಂಗಡಿಯಲ್ಲಿ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಿದ ಅಶೋಕ್ ರೈ ಅವರು ಸ್ಥಳದಲ್ಲೇ ಅಧಿಕಾರಿಗಳನ್ನು ತರಾಟೆಗೆ ಎತ್ತಿಕೊಂಡರು. ಮಾಣಿ- ಕಲ್ಲಡ್ಕ ಮಧ್ಯೆ ಒಂದು ಭಾಗದ ರಸ್ತೆಯನ್ನಾದರೂ ಶೀಘ್ರದಲ್ಲೇ ಸಂಚಾರ ಮುಕ್ತಗೊಳಿಸಿ. ಮುಂದಿನ ಮಳೆಗಾಲ ಆರಂಭಗೊಳ್ಳುವ ಮುನ್ನ ಪೂರ್ತಿ ಬಿ.ಸಿ.ರೋಡ್- ಅಡ್ಡಹೊಳೆ ಕಾಮಗಾರಿ ಮುಗಿಯಬೇಕು ಎಂದು ಸೂಚನೆ ನೀಡಿದರು.