ಜಿಪಂ ಸಿಇಒ ಅಮಾನತು ಮಾಡದಿದ್ದರೆ ಪ್ರತಿಭಟನೆ

| Published : Mar 29 2025, 12:32 AM IST

ಜಿಪಂ ಸಿಇಒ ಅಮಾನತು ಮಾಡದಿದ್ದರೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ನಾನಾ ಯೋಜನೆಗಳಡಿ ಕಾಮಗಾರಿಗಳ ಗುತ್ತಿಗೆ ನೀಡುವ ವಿಚಾರದಲ್ಲಿ ಲಂಚ ಪಡೆದು ಲೂಟಿ ಮಾಡಲಾಗುತ್ತಿದ್ದು, ತಕ್ಷಣದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಅವರನ್ನು ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಒಳಪಡಿಸಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಎಚ್ಚರಿಸಿದರು. ಇತ್ತೀಚಿಗೆ ಅರಸೀಕೆರೆ ತಾಲೂಕಿನ ಪುರ್ಲೆಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ ಇಒ, ಸಿಇಒ ಸೇರಿದಂತೆ ಇತರೆ ಮೇಲಧಿಕಾರಿಗಳಿಗೆ ಹಣ ನೀಡಬೇಕು. ಆದ್ದರಿಂದ ಗುತ್ತಿ ಗೆ ನೀಡಲು ಇಂತಿಷ್ಟು ಹಣ ಕಡ್ಡಾಯವಾಗಿ ನೀಡಲೇಬೇಕು ಎಂದು ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ದೂರಿದರು.

ಕನ್ನಡಪ್ರಭ ವಾರ್ತೆ ಹಾಸನ

ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ನಾನಾ ಯೋಜನೆಗಳಡಿ ಕಾಮಗಾರಿಗಳ ಗುತ್ತಿಗೆ ನೀಡುವ ವಿಚಾರದಲ್ಲಿ ಲಂಚ ಪಡೆದು ಲೂಟಿ ಮಾಡಲಾಗುತ್ತಿದ್ದು, ತಕ್ಷಣದಲ್ಲಿ ಜಿಲ್ಲಾ ಪಂಚಾಯತ್ ಸಿಇಒ ಅವರನ್ನು ಸೇವೆಯಿಂದ ಅಮಾನತು ಮಾಡಿ ತನಿಖೆಗೆ ಒಳಪಡಿಸಬೇಕು. ಇಲ್ಲವಾದರೆ ಪ್ರತಿಭಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಎಚ್ಚರಿಸಿದರು.

ನಗರದ ಬಿ.ಎಂ. ರಸ್ತೆ ಬಳಿ ಇರುವ ಎಚ್.ಡಿ.ಸಿ.ಸಿ. ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನರೇಗಾ ಯೋಜನೆಯಲ್ಲಿ ಹೆಚ್ಚುವರಿ ಡಿಪಿಆರ್‌ ಅನುಮೋದನೆ ಪಡೆಯಲು ಗ್ರಾಮ ಪಂಚಾಯಿತಿ ಪ್ರತಿ ಸದಸ್ಯನಿಂದ ಶೇಕಡವಾರು ಕಮಿಷನ್ ಪಡೆಯಲಾಗುತ್ತಿದೆ. ಇತ್ತೀಚಿಗೆ ಅರಸೀಕೆರೆ ತಾಲೂಕಿನ ಪುರ್ಲೆಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ ಇಒ, ಸಿಇಒ ಸೇರಿದಂತೆ ಇತರೆ ಮೇಲಧಿಕಾರಿಗಳಿಗೆ ಹಣ ನೀಡಬೇಕು. ಆದ್ದರಿಂದ ಗುತ್ತಿ ಗೆ ನೀಡಲು ಇಂತಿಷ್ಟು ಹಣ ಕಡ್ಡಾಯವಾಗಿ ನೀಡಲೇಬೇಕು ಎಂದು ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ದೂರಿದರು.

ತನಿಖೆ ನಡೆಸಿ:

ಪಂಚಾಯಿತಿಗಳಲ್ಲಿ ಕಮಿಷನ್ ದಂಧೆ ವಿಪರೀತವಾಗಿದೆ. ಯಾವುದೇ ಗ್ರಾಮ ಸಭೆಯನ್ನು ನಡೆಸಲಾಗುತ್ತಿಲ್ಲ. ಸಂವಿಧಾನ ವಿರೋಧಿ ಕೆಲಸಗಳೇ ಆಗುತ್ತಿದ್ದು ಇದರ ವಿರುದ್ಧ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೊಳೆನರಸೀಪುರ ತಾಲೂಕಿನ ಮೂಡಲಹಿಪ್ಪೆ , ಹಳೆಕೋಟೆ, ಕಟ್ಟೆಪುರ ಗ್ರಾಮ ಪಂಚಾಯತಿಗಳಲ್ಲಿ ಅಧ್ಯಕ್ಷರ ಸಹಿ ಪಡೆಯದೆ ಹಲವು ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಬಗ್ಗೆ ಪ್ರಶ್ನಿಸುವುದಾಗಿ ತಿಳಿದ ನಂತರ ಸಿಇಒ ಈ ಕಡತಕ್ಕೆ ಅನುಮತಿ ನೀಡಿಲ್ಲ. ಈ ರೀತಿ ನಾನಾ ಅಕ್ರಮಗಳು ನಡೆಯುತ್ತಿದ್ದು ಸಿಇಒ ಪೂರ್ಣಿಮಾ ಅವರ ಅಮಾನತು ಮಾಡಬೇಕು ಹಾಗೂ ಇಲಾಖಾವಾರು ತನಿಖೆಗೆ ಆದೇಶ ಮಾಡಬೇಕು ಎಂದು ಆಗ್ರಹಿಸಿದರು.

ಸಂಸದರು ಸುಮ್ಮನಿದ್ದಾರೆ:

ಚನ್ನರಾಯಪಟ್ಟಣ ತಾಲೂಕಿನ ಸಾತೇನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿ ಅರುಣ್ ಕುಮಾರ್ ಅವರ ಮೇಲೆ ಗ್ರಾಮ ಪಂಚಾಯತಿ ಸದಸ್ಯ ಯೋಗೀಶ್ ಎಂಬುವರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಮಾರ್ಚ್ ೨೫ರಂದು ದೂರು ನೀಡಿದರೂ ಪೊಲೀಸ್ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಸುದ್ದಿಗೋಷ್ಠಿ ಮಾಡಿದ ನಂತರ ಮರುದಿನ ಎಫ್‌ಐಆರ್ ದಾಖಲಿಸಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯನ ವಿರುದ್ಧ ಸೆಕ್ಷನ್ ೧೨೧/೧, ೧೩೩ ಅಡಿ ದೂರು ದಾಖಲಾಗಿದೆ. ಮೆಜಿಸ್ಟ್ರೇಟ್ ಮೂಲಕವೇ ಜಾಮೀನು ಪಡೆಯಬೇಕಾಗಿದೆ, ಆದರೆ ಸ್ಟೇಷನ್ ಬೇಲ್ ನೀಡಿದ್ದರೂ ಹೇಗೆ ಎಂದು ಪ್ರಶ್ನಿಸಿದರು. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಇನ್ನು ಇಷ್ಟೆಲ್ಲಾ ಅವ್ಯವಹಾರ ನಡೆಯುತ್ತಿದ್ದರೂ ಹಾಸನ ಜಿಲ್ಲೆಯ ಸಂಸದರಾದ ಶ್ರೇಯಸ್ ಎಂ. ಪಟೇಲ್ ಏನೂ ಬಾಯಿ ಬಿಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಆಡಿಯೋ ವೈರಲ್:

ಅರಸೀಕೆರೆ ತಾಲೂಕಿನ, ಪುರ್ಲೆಹಳ್ಳಿ ಗ್ರಾಮ ಪಂಚಾಯಿತಿ. ಪಿಡಿಒ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಈಗಾಗಲೇ ಆಗಿದ್ದು, ಅವರನ್ನು ಕರೆದು ವಿಚಾರಣೆ ಮಾಡಿದ್ದೇನೆ. ಸರಿಯಾದ ಉತ್ತರ ನೀಡದ ಕಾರಣ ನೋಟಿಸ್ ಜಾರಿ ಮಾಡಲಾಗಿದೆ. ನೋಟೀಸ್ ಗೆ ಉತ್ತರ ಬಂದ ನಂತರ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಜಿ.ಪಂ. ಸಿಇಒ ಪೂರ್ಣಿಮಾ ಹೇಳಿದ್ದಾರೆ. ಹಾಸನ ಜಿಲ್ಲೆಯಲ್ಲಿ ೨೬೪ ಗ್ರಾ.ಪಂ.ಗಳಿದ್ದು, ಸಾವಿರಾರು ಸದಸ್ಯರು ಇದ್ದಾರೆ. ಗ್ರಾಮಸಭೆಯಲ್ಲಿ ಅನುಮೋದನೆ ಆಗಿ ಇಓಗಳು ನಮಗೆ ವರದಿ ಕಳುಹಿಸುತ್ತಾರೆ. ಅದನ್ನು ಪರಿಶೀಲನೆ ಮಾಡಿ ಅನುಮತಿ ನೀಡುತ್ತೇವೆ. ಅವಶ್ಯಕ ಕಾಮಗಾರಿಗಳಿಗೆ ಮಾತ್ರ ಅನುಮೋದನೆ ನೀಡಿದ್ದೇವೆ. ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯತ್‌ ಅರ್ನಿಬಂಧಿತ ಅನುದಾನವನ್ನು ಮಾನದಂಡಗಳ ಪ್ರಕಾರವೇ ಕೊಟ್ಟಿದ್ದು, ಈ ಬಗ್ಗೆ ಸರ್ಕಾರಕ್ಕೂ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪಿಡಿಒ ಮೇಲೆ ಕೊಲೆ ಯತ್ನ:

ಪಿಡಿಒ ಮೇಲೆ ಕೊಲೆ ಯತ್ನ ನಡೆದಿದೆ. ಈ ಸಂಬಂಧ ಸಿಸಿ ಕ್ಯಾಮೆರಾದಲ್ಲಿ ಪುರಾವೆ ಇದ್ದರೂ ಸಹ ಹಲ್ಲೆ ಮಾಡಿದ ಸದಸ್ಯನ ವಿರುದ್ಧ ಸೆಕ್ಷನ್ ೩೦೭ ಅಡಿ ಪ್ರಕರಣ ದಾಖಲಿಸದೇ ಇರುವುದು ರಾಜಕೀಯ ಪ್ರೇರಿತವಾಗಿದ್ದು, ಈ ಬಗ್ಗೆ ಸಂಬಂಧಿಸಿದ ಸಚಿವರಿಗೆ ದೂರು ಕೊಡಲಾಗುವುದು. ಗ್ರಾಮ ಪಂಚಾಯಿತಿಯಲ್ಲಿ ಇಷ್ಟೆಲ್ಲಾ ಅಕ್ರಮ ನಡೆಯುತ್ತಿರುವ ಬಗ್ಗೆ ಸಕಲೇಶಪುರ ಹಾಗೂ ಬೇಲೂರಿನ ಶಾಸಕರು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡಿದರೂ ಸಹ ಇದುವರೆಗೂ ಸಂಬಂಧಪಟ್ಟ ಸಚಿವರು ಹಾಗೂ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಂಡಿರುವುದಿಲ್ಲ. ಜಿಲ್ಲಾ ಪಂಚಾಯತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೂಡಲೇ ಸಂಬಂಧಪಟ್ಟ ಸಚಿವರು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಜಿಲ್ಲೆಯಲ್ಲಿ ಉಗ್ರವಾದ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ಕೊಟ್ಟರು.

ಸುದ್ದಿಗೋಷ್ಠಿಯಲ್ಲಿ ಎಚ್.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜ್, ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಎಸ್. ದ್ಯಾವೇಗೌಡ , ಸ್ವಾಮಿಗೌಡ, ಬ್ಯಾಂಕಿನ ನಿರ್ದೇಶಕ ಬಿದರಿಕೆರೆ ಜಯರಾಮ್ ಇತರರು ಉಪಸ್ಥಿತರಿದ್ದರು.