ಸಾರಾಂಶ
ಹಾವೇರಿ: ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸಮಾಜದ ಶಾಸಕರು ಧ್ವನಿ ಎತ್ತದಿರುವುದರಿಂದ ಸೆ.೨೨ರಂದು ಸಮಾಜದ ವಕೀಲರ ಪರಿಷತ್ತಿನಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ ೧೦ ಗಂಟೆಗೆ ಬೆಳಗಾವಿಯ ಗಾಂಧಿ ಭವನದಲ್ಲಿ ರಾಜ್ಯಮಟ್ಟದ ವಕೀಲರ ಬೃಹತ್ ಸಮಾವೇಶ ನಡೆಸಿ ನಂತರ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿದೆ. ಕಳೆದ ಮೂರುವರೆ ವರ್ಷಗಳಿಂದ ಮೀಸಲಾತಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದರೂ ಸರ್ಕಾರ ಸಮುದಾಯದ ಬೇಡಿಕೆಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸರ್ಕಾರದ ನಿರ್ಲಕ್ಷ÷್ಯ ಧೋರಣೆ ಹಾಗೂ ಸಮಾಜದ ಶಾಸಕರು ಧ್ವನಿ ಎತ್ತದಿರುವುದರಿಂದ ಏಳನೇ ಹಂತದ ಹೋರಾಟವಾಗಿ ಸಮಾಜದ ವಕೀಲರ ಮೂಲಕ ಹೋರಾಟಕ್ಕೆ ಮುಂದಾಗಿದ್ದೇವೆ ಎಂದರು. ಮೀಸಲಾತಿ ಹೋರಾಟದ ಮುಂದಿನ ನಡೆಗಾಗಿ ಸೆ.೨೨ ರಂದು ಸಮುದಾಯದ ವಕೀಲರ ಸಭೆ ನಡೆಸುತ್ತಿದ್ದೇವೆ. ಈ ಸಭೆಯಲ್ಲಿ ಸಮಾಜದ ವಕೀಲರೊಂದಿಗೆ ಕಾನೂನಾತ್ಮಕ ಹೋರಾಟದ ಕುರಿತು ಚರ್ಚಿಸಲಾಗುತ್ತದೆ. ಜೊತೆಗೆ ಸಮಾಜದ ಹಿರಿಯ ೧೨ ವಕೀಲರ ನಿಯೋಗ ರಚಿಸಿ ಮುಖ್ಯಮಂತ್ರಿಗಳನ್ನು ಭೇಟಿಗೆ ಕಳುಹಿಸಿಕೊಡಲಾಗುವುದು. ಈ ಮೂಲಕ ಬಿಸಿ ಮುಟ್ಟಿಸಿ, ಸರ್ಕಾರದ ಕಣ್ಣು ತೆರೆಸುವ ಹೋರಾಟಕ್ಕೆ ಅಣಿಯಾಗಿದ್ದೇವೆ. ಸರ್ಕಾರ ಕಾನೂನು ಸಭೆ ಕರೆದು ಮೀಸಲಾತಿ ಬಗ್ಗೆ ಚರ್ಚೆ ಮಾಡುವವರಿಗೂ ಹೋರಾಟ ಮುಂದುವರೆಸುತ್ತೇವೆ ಎಂದರು.ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕುರಿತು ಸಮುದಾಯದ ಶಾಸಕರು ಸದನದಲ್ಲಿ ಪ್ರಶ್ನೆ ಕೇಳಲು ಮುಂದಾದಾಗ ಸಭಾಧ್ಯಕ್ಷರು ಅವಕಾಶ ನೀಡಿಲ್ಲ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ನಮ್ಮ ಸಮುದಾಯದ ಶಾಸಕರು ಎರಡು ಬಾರಿ ಮಾತನಾಡಿದ್ದರೂ ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಾಜದ ವಕೀಲರಾದ ಎಸ್.ಎಸ್.ಹಿರೇತನದ, ವಿ.ಎನ್ ದೇವಗಿರಿ, ಎನ್.ಎಸ್.ಪಾಟೀಲ, ಪ್ರಭು ಬಿಷ್ಟನಗೌಡ್ರ, ಶಿವರಾಜ ವನ್ನಳ್ಳಿ, ಸಿ.ಪಿ.ಜಾವಗಲ್, ಐ.ವಿ.ಪಾಟೀಲ, ಎಂ.ಸಿ.ಭರಮಣ್ಣನವರ, ಎಚ್.ಸಿ.ಸಿದ್ದನಗೌಡ್ರ, ಎ.ಡಿ.ಹೊಸಮನಿ, ಎಸ್.ಎಲ್.ಶಿವಣ್ಣನವರ ಇತರರು ಇದ್ದರು. ಸಮಾಜದ ಶಾಸಕರು ಧ್ವನಿ ಎತ್ತುತ್ತಿಲ್ಲ: ಬಿಜೆಪಿ ಸರ್ಕಾರ ಇದ್ದಾಗ ನಮ್ಮ ಸಮಾಜದ ಶಾಸಕರೇ ನಮ್ಮ ಬಳಿ ಬಂದು ಮೀಸಲಾತಿ ಬಗ್ಗೆ ಮಾತನಾಡಿ ಎನ್ನುತ್ತಿದ್ದರು. ಆದರೆ ಈಗ ಶಾಸಕರೇ ಮೀಸಲಾತಿ ಬಗ್ಗೆ ಧ್ವನಿ ಎತ್ತಿ ಎಂದು ನಾವೇ ಅವರ ಮನೆ ಬಾಗಿಲಿಗೆ ಹೋಗುವ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಾಸಕರು ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಕೊಡಿಸಲು ತಡವಾದರೂ ಪರವಾಗಿಲ್ಲ. ಸದನದಲ್ಲಿ ಧ್ವನಿ ಎತ್ತುವ ಮೂಲಕ ಲಿಂಗಾಯತರನ್ನು ಒಬಿಸಿಗೆ ಸೇರಿಸಿ ಪುಣ್ಯ ಕೊಟ್ಟಿಕೊಳ್ಳಿ. ಈ ಮೂಲಕ ಸಮಾಜದ ಋಣ ತೀರಿಸುವ ಕೆಲಸ ಮಾಡಿ ಎಂದು ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.