ಪಟ್ಟಣದ ಮುರಿನಕಟ್ಟೆ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟೆಯನ್ನು ಧ್ವಂಸ ಮಾಡಿರುವುದನ್ನು ಖಂಡಿಸಿ ಮತ್ತು ಕಟ್ಟೆ ನಿರ್ಮಾಣಕ್ಕಾಗಿ ಆಗ್ರಹಿಸಿ ಶುಕ್ರವಾರ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಸೇರಿದಂತೆ ಹಲವರು ಭಾಗಿ

ಕನ್ನಡಪ್ರಭ ವಾರ್ತೆ ಭಟ್ಕಳ

ಪಟ್ಟಣದ ಮುರಿನಕಟ್ಟೆ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಕಟ್ಟೆಯನ್ನು ಧ್ವಂಸ ಮಾಡಿರುವುದನ್ನು ಖಂಡಿಸಿ ಮತ್ತು ಕಟ್ಟೆ ನಿರ್ಮಾಣಕ್ಕಾಗಿ ಆಗ್ರಹಿಸಿ ಶುಕ್ರವಾರ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಪ್ರತಿಭಟನೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಹಲವು ರಾಜ್ಯ ನಾಯಕರು, ಮುಖಂಡರು ಆಗಮಿಸಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಆಟೋ ರಿಕ್ಷಾ ಸಾರ್ವಜನಿಕ ಗಣೇಶೋತ್ಸವ ಮೈದಾನದಿಂದ ಪ್ರತಿಭಟನಾ ರ್‍ಯಾಲಿ ಹೊರಟು ತಾಲೂಕು ಆಡಳಿತ ಸೌಧದಲ್ಲಿ ಅಧಿಕಾರಿಗಳಿಗೆ ಮನವಿ ಸಲ್ಲಿಸಲಿದ್ದಾರೆ. ಹಿಂದೂ ಕಾರ್ಯಕರ್ತರ ಮೇಲೆ ದಾಖಲಿಸಿದ ಮೊಕದ್ದಮೆ ವಾಪಸ್ ಪಡೆಯಬೇಕು. ಧ್ವಂಸ ಮಾಡಿದ ಕಟ್ಟೆ ಮರು ನಿರ್ಮಾಣ ಮಾಡಬೇಕು. ಧ್ವಂಸ ಮಾಡಿದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿ ಬಂಧಿಸಬೇಕು ಎನ್ನುವುದು ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಬೇಡಿಕೆಯಾಗಿದೆ. ಪ್ರತಿಭಟನೆಯಲ್ಲಿ ತಾಲೂಕು ಸೇರಿದಂತೆ ವಿವಿಧ ಭಾಗದಿಂದ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಬಿಗಿ ಪೊಲೀಸ್ ಬಂದೋಬಸ್ತ್‌:

ಪ್ರತಿಭಟನೆಯ ಹಿನ್ನೆಲೆ ಪಟ್ಟಣದಲ್ಲಿ ಭಾರೀ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಈಗಾಗಲೇ ಮುರಿನಕಟ್ಟೆ ವಿವಾದ, ಬಕ್ರೀದ್ ಹಬ್ಬದ ಬಂದೋಬಸ್ತ್‌ಗಾಗಿ ಐದುನೂರಕ್ಕೂ ಹೆಚ್ಚು ಪೊಲೀಸರನ್ನು ಬೇರೆ ಬೇರೆ ಕಡೆಯಿಂದ ಕರೆಯಿಸಲಾಗಿದ್ದು, ಇಂದಿನ ಪ್ರತಿಭಟನೆಗೆ ಮತ್ತಷ್ಟು ಪೊಲೀಸರು ಆಗಮಿಸುವ ನಿರೀಕ್ಷೆ ಇದೆ. ಭಟ್ಕಳ ಪಟ್ಟಣದಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಎಲ್ಲಾ ಕಡೆಗಳಲ್ಲಿಯೂ ತೀವ್ರ ನಿಗಾ ಇಡಲಾಗಿದೆ. ಹಿಂದೆ ಭಟ್ಕಳದಲ್ಲಿ ಸೇವೆ ಸಲ್ಲಿಸಿ ವರ್ಗಗೊಂಡಿದ್ದ ಪೊಲೀಸ್ ಅಧಿಕಾರಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ. ಪ್ರತಿಭಟನೆ ವೇಳೆ ಯಾವುದೇ ಅಹಿತರ ಘಟನೆ ಉಂಟಾಗದಂತೆ ಎಲ್ಲೆಡೆ ಹದ್ದಿನ ಕಣ್ಣಿಡಲಾಗಿದೆ.

ಮುರಿನಕಟ್ಟೆಗೂ ಬಂದೋಬಸ್ತ್‌:

ಕಟ್ಟೆ ಧ್ವಂಸದಿಂದ ವಿವಾದಿತ ಪ್ರದೇಶವಾಗಿರುವ ಮುರಿನಕಟ್ಟೆ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತ್‌ ಮುಂದುವರಿಸಲಾಗಿದೆ. ಸುಮಾರು 100ಕ್ಕೂ ಅಧಿಕ ಪೊಲೀಸರು, ಹಲವು ಪೊಲೀಸ್ ಅಧಿಕಾರಿಗಳು ಬಂದೋಬಸ್ತನಲ್ಲಿದ್ದಾರೆ. ಮೊನ್ನೆ ಕಟ್ಟೆ ಧ್ವಂಸ ನಡೆದ ಸ್ಥಳದಲ್ಲಿ ಯಾರಿಗೂ ಹೋಗಲು ಬಿಡುತ್ತಿಲ್ಲ. ಸುತ್ತಲೂ ಬ್ಯಾರಿಕೇಡ ಹಾಕಿ ಬಂದ್ ಮಾಡಲಾಗಿದೆ. ಹೆದ್ದಾರಿಯ ಬದಿಯಲ್ಲೇ ಇದು ಇರುವುದರಿಂದ ವಾಹನದಲ್ಲಿ ಹೋಗುವವರು ವೀಕ್ಷಿಸಿ ಹೋಗುವುದು ಕಂಡು ಬಂದಿದೆ.