ಪ್ರತಿಭಟನಾ ರ್‍ಯಾಲಿ ಕುರಿತಂತೆ ಜೆ.ಯಾದವರೆಡ್ಡಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎಸ್ಐಆರ್ ಮೂಲಕ ಸಣ್ಣ ಸಣ್ಣ ತಪ್ಪುಗಳನ್ನು ಹುಡುಕಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರ ಹಾಕುವುದರ ವಿರುದ್ಧ ಮೇ 30ರಂದು ಪ್ರತಿಭಟನಾ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಎದ್ದೇಳು ಕರ್ನಾಟಕದ ಜಿಲ್ಲಾ ಸಂಚಾಲಕ ಜೆ.ಯಾದವರೆಡ್ಡಿ ಹೇಳಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಚುನಾವಣಾ ಆಯೋಗ ಅಧಿಕಾರ ಹೊಂದಿರುವುದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದು ಸ್ವಾಗತಾರ್ಹ. ಆದರೆ ಸಣ್ಣಸಣ್ಣ ಕಾರಣಗಳನ್ನು ಹುಡುಕಿ ಅರ್ಹ ಮತದಾರರನ್ನು ಮತಪಟ್ಟಿಯಿಂದ ಹೊರ ಹಾಕುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹೊಸದೇನಲ್ಲ, ಈ ಹಿಂದೆಯೂ ಇತ್ತು. 324ನೇ ವಿಧಿ ಅನ್ವಯ ಪರಿಷ್ಕರಣೆಗೆ ಚುನಾವಣಾ ಆಯೋಗಕ್ಕೆ ಅಧಿಕಾರವಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. 1952ರಲ್ಲಿ ಪ್ರಥಮ ಬಾರಿಗೆ ಸಾರ್ವತ್ರಿಕ ಚುನಾವಣೆ ನಡೆದಾಗ 17.80 ಕೋಟಿ ಮತದಾರರಿಗೆ ಮತದಾನಕ್ಕೆ ಅವಕಾಶ ಕೊಟ್ಟಿತ್ತು. ಏಳು ಬಾರಿ ಪರಿಷ್ಕರಣೆ ನಡೆದಾಗಲು ವಿಶೇಷ ಅಂತಿರಲಿಲ್ಲ. 18 ವರ್ಷವಾಗಿರುವವರನ್ನು ಮತದಾರರ ಪಟ್ಟಿಗೆ ಸೇರಿಸುವುದು. ಮೃತರ ಹೆಸರನ್ನು ಡಿಲಿಟ್ ಮಾಡುವುದು ಪದ್ಧತಿ. ಆದರೆ ಈಗಿನ ಪರಿಷ್ಕರಣೆಯಿಂದ 10 ರಿಂದ 12 ಕೋಟಿ ಮತದಾರರು ಪಟ್ಟಿಯಿಂದ ಹೊರ ಹೋಗುತ್ತಾರೆ. ಎಸ್‌ಐಆರ್ ಹೆಸರಿನಲ್ಲಿ ಅಲ್ಪಸಂಖ್ಯಾತರು, ಬಡವರು, ದಲಿತರಿಗೆ ಅನ್ಯಾಯವಾಗುತ್ತದೆ. ಹುಡುಕಿ ಹುಡುಕಿ ಕೆಲವರನ್ನು ಚುನಾವಣೆ ಪ್ರಕ್ರಿಯೆಯಿಂದ ಹೊರ ಹಾಕಲಾಗುತ್ತಿದೆ ಎಂದು ದೂರಿದರು.

ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕು ನೀಡಿರುವಾಗ ಮತ ಪರಿಷ್ಕರಣೆ ಹೆಸರಿನಲ್ಲಿ ಮತದಾನವನ್ನು ಕಸಿದುಕೊಳ್ಳುವುದಾದರೆ ಪ್ರಜಾಪ್ರಭುತ್ವ ಉಳಿಯುವುದಾದರೂ ಹೇಗೆ? ಕಟ್ಟಕಡೆಯ ಮನುಷ್ಯನೂ ಮತದಾನದ ಹಕ್ಕು ಚಲಾಯಿಸುವಂತ ನ್ಯಾಯ ಕೊಡಿಸುವುದು ಆಳುವ ಸರ್ಕಾರಗಳ ಧ್ಯೇಯವಾಗಬೇಕು ಎಂದು ಯಾದವರೆಡ್ಡಿ ಹೇಳಿದರು.

ನಿವೃತ್ತ ಪ್ರಾಚಾರ್ಯ ಶಿವಕುಮಾರ್ ಮಾತನಾಡಿ, ಮತಪಟ್ಟಿಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ ಪಟ್ಟಿಯಲ್ಲಿರುವವರಿಗೆ ಮತದಾನದ ಹಕ್ಕು ನೀಡುವುದು ಚುನಾವಣಾ ಆಯೋಗದ ಉದ್ದೇಶವಾಗಬೇಕು. ಈಗಿನ ಎಸ್ಐಆರ್ ಜನದ್ರೋಹಿ ರೀತಿ ರೂಪಾಂತರಗೊಂಡು ಸಮಸ್ಯೆಗಳನ್ನು ಹುಟ್ಟುಹಾಕುತ್ತಿದೆ. ಮತ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಚುನಾವಣಾ ಆಯೋಗಕ್ಕೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ಹೇಳಿರುವುದನ್ನು ಮತ್ತೊಮ್ಮೆ ಪರಾಮರ್ಶಿಸುವುದು ಒಳ್ಳೆಯದು ಎಂದು ಹೇಳಿದರು.

ಎಐಡಿಎಸ್‌ಒ ಸಂಘಟನೆಯ ರವಿಕುಮಾರ್ ಮಾತನಾಡಿ, ಪ್ರತಿ 10 ವರ್ಷಗಳಿಗೊಮ್ಮೆ ಕೇಂದ್ರ ಚುನಾವಣಾ ಆಯೋಗ ಮತಪಟ್ಟಿಯ ಪರಿಷ್ಕರಣೆ ಮಾಡುತ್ತದೆ. ಕೇಂದ್ರ ಸರ್ಕಾರ ಉದ್ದೇಶ ಪೂರಿತವಾಗಿ ಎಸ್‌ಐಆರ್‌ ಮೂಲಕ ಮತಪಟ್ಟಿ ಪರಿಷ್ಕರಣೆಗೆ ಮುಂದಾಗಿ ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಏಕಾಏಕಿ ಪರಿಷ್ಕರಣೆ ನಡೆಸುವ ಬದಲು ಸಮಯ ನೀಡಿ ಸರಿಪಡಿಸಿಕೊಳ್ಳಲು ಮತದಾರರಿಗೆ ಅವಕಾಶ ಕೊಡಬೇಕು. ಚುನಾವಣಾ ಆಯೋಗ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ಕೆಲಸ ಮಾಡುವುದು ಸರಿಯಲ್ಲ ಎಂದರು.

ಜನಶಕ್ತಿ ರಾಜ್ಯ ಸಮಿತಿ ಸದಸ್ಯ ಟಿ.ಶಫಿವುಲ್ಲಾರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನ ಮಾಳಿಗೆ ಧನಂಜಯ ಇದ್ದರು.