ಸಾರಾಂಶ
ಹಾವೇರಿ: ಕಬ್ಬು ಪೂರೈಕೆ ಮಾಡಿ ಎರಡು ತಿಂಗಳ ಕಳೆದರೂ ಹಣ ಪಾವತಿಸದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಕಬ್ಬು ಬೆಳೆಗಾರರು ತಾಲೂಕಿನ ಸಂಗೂರಿನ ಜಿಎಂ ಶುಗರ್ಸ್ ಕಾರ್ಖಾನೆ ಎದುರು ರಸ್ತೆ ತಡೆ ನಡೆಸಿ ಸೋಮವಾರ ಪ್ರತಿಭಟನೆ ನಡೆಸಿದರು.
ಕಬ್ಬು ಕಟಾವು ಮಾಡಿ ಸಕ್ಕರೆ ಕಾರ್ಖಾನೆಗೆ ಕಳುಹಿಸಿ ಎರಡು ತಿಂಗಳ ಗತಿಸಿದರೂ ಕಬ್ಬು ಸಾಗಾಣಿಕೆ ಮಾಡಿದ ರೈತರಿಗೆ ಹಣ ಪಾವತಿಸದೇ ಜಿ.ಎಂ. ಶುಗರ್ಸ್ ಆಡಳಿತ ಮಂಡಳಿ ಬೇಜವಾಬ್ದಾರಿ ತೋರಿಸಿದ್ದನ್ನು ಖಂಡಿಸಿ ಮೊದಲು ಎಚ್ಚರಿಕೆ ನೀಡಲಾಗಿತ್ತು. ಅದಕ್ಕೆ ಸ್ಪಂದಿಸದೇ ಇದ್ದಾಗ ಒಂದು ದಿನದ ಧರಣಿ ನಡೆಸಿ ಎಚ್ಚರಿಸಿ, ಎರಡು ದಿನಗಳ ಕಾಲವಕಾಶ ನೀಡಲಾಗಿತ್ತು. ಆದಾಗ್ಯೂ ಎಚ್ಚರಗೊಳ್ಳದೇ ಇದ್ದಾಗ ಕಾರ್ಖಾನೆ ಮುಖ್ಯದ್ವಾರ, ಗೇಟ್, ವೇಬ್ರಿಜ್ ಗೆಟ್, ಕಾರ್ಖಾನೆಯ ಬ್ಯಾಂಕ್ ಮತ್ತು ಆಡಳಿತ ಕಚೇರಿಗೆ ಬೀಗ ಜಡಿದು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.ಈ ವೇಳೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಮಾತನಾಡಿ, ಸರ್ಕಾರದ ಆದೇಶದಂತೆ ಕಬ್ಬು ಸಕ್ಕರೆ ಕಾರ್ಖಾನೆಗೆ ತಲುಪಿದ 14 ದಿನಗಳಲ್ಲಿ ಹಣ ಪಾವತಿಸಬೇಕು. ಆದರೆ ಜಿ.ಎಂ. ಶುಗರ್ಸ್‌ನವರು ಎರಡು ತಿಂಗಳಿಂದ ರೈತರ ಬಾಕಿ ಉಳಿಸಿಕೊಂಡು ಆಟವಾಡುತ್ತಿದ್ದರು. ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಕಾರ್ಖಾನೆ ಸಿಬ್ಬಂದಿ ಹೇಳಿಕೆಗೆ ಸೀಮಿತರಾಗಿದ್ದರು. ಸುಮಾರು 2 ಸಾವಿರ ರೈತರ 1 ಲಕ್ಷ 20 ಸಾವಿರ ಟನ್ ಕಬ್ಬಿನ ಅಂದಾಜು ₹38 ಕೋಟಿ ಮೊತ್ತ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ. ಸರ್ಕಾರದ ನಿಯಮಾವಳಿ ಪ್ರಕಾರ 14 ದಿನಕ್ಕಿಂತ ತಡ ಮಾಡಿದರೆ ಅಸಲು ಮೊತ್ತಕ್ಕೆ ಶೇ. 16ರ ಬಡ್ಡಿ ಸೇರಿಸಿ ನೀಡಬೇಕು ಎಂದು ಒತ್ತಾಯಿಸಿದರು.
ರೈತರ ಹೋರಾಟದ ಬೆನ್ನಲ್ಲೇ ಜಿ.ಎಂ. ಶುಗರ್ಸ್ ಆಡಳಿತ ಮಂಡಳಿ ಬಾಕಿ ಮೊತ್ತ ₹38 ಕೋಟಿ ಪೈಕಿ ₹4 ಕೋಟಿ ಹಣವನ್ನು ವಿವಿಧ ರೈತರ ಖಾತೆಗೆ ಜಮಾ ಮಾಡಿದ್ದು ಫೆ. 28ರ ಒಳಗಾಗಿ ಬಾಕಿ ಮೊತ್ತ ಪಾವತಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂಪಡೆದರು.ಪ್ರತಿಭಟನೆಯಲ್ಲಿ ರೈತ ಮುಖಂಡರಾದ ರಾಜಶೇಖರ ಬೆಟಗೇರಿ, ದಾನೇಶಪ್ಪ ಕೆಂಗೊಂಡ, ಮಂಜುನಾಥ ಅಸುಂಡಿ, ನಾಗಪ್ಪ ಕೆಮ್ಮಗೊಂಡ, ಮಲ್ಲಪ್ಪ ಬೈಲನಾಯಕರ, ಎಸ್.ವಿ. ಸಂಗೂರಮಠ, ಬಸಣ್ಣ ಕಳಸೂರ, ಗುರುನಂಜಪ್ಪ ವರದಿ, ಗಿರೀಶ ಕೆರೆಗೊಂಡರ, ನಿಂಗಪ್ಪ ನರೇಗಲ್, ಶಿವಯೋಗಿ ಹೂಗಾರ, ಶಿವಲಿಂಗಪ್ಪ ಕಾಳಂಗಿ, ಗುರಪ್ಪ ಕರೆಗೊಂಡರ, ಬಸವರಾಜ ಮುಂದಿನಮನಿ, ಸುರೇಶ ಹೊಸಕೇರಿ, ಬಸಪ್ಪ ಕಳಸದ, ಹನುಮಂತ ಪಾಟೊಳಿ ಪಾಲ್ಗೊಂಡಿದ್ದರು.ಸರ್ಕಾರಿ ನೌಕರರ ಸಂಘದಿಂದ ರಕ್ತದಾನ ಶಿಬಿರ
ಹಾನಗಲ್ಲ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಆಶ್ರಯದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಇದೇ ವೇಳೆ ಸರ್ಕಾರಿ ನೌಕರರ ಆರೋಗ್ಯ ತಪಾಸಣೆಯನ್ನೂ ಮಾಡಲಾಯಿತು.ಸಂಘದ ೧೫೨ ಸದಸ್ಯರು ಆರೋಗ್ಯ ತಪಾಸಣೆಗೆ ಒಳಗಾದರು. ೨೭ ಸದಸ್ಯರು ರಕ್ತದಾನ ಮಾಡಿದರು. ಜಿಲ್ಲಾಸ್ಪತ್ರೆಯ ರಕ್ತ ಭಂಡಾರದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ರಕ್ತ ಸಂಗ್ರಹ ಮಾಡಿಕೊಂಡರು.ತಹಸೀಲ್ದಾರ್ ರೇಣುಕಾ ಎಸ್. ಅವರು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ತಾಲೂಕು ವೈದ್ಯಾಧಿಕಾರಿ ಡಾ. ಲಿಂಗರಾಜ ಕೆ.ಜಿ., ಡಾ. ಬಸವರಾಜ ತಳವಾರ ಮತ್ತು ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಗುರುನಾಥ ಗವಾಣಿಕರ, ಕಾರ್ಯದರ್ಶಿ ಬಸವರಾಜ ಕುಂಚೂರ, ಕೋಶಾಧ್ಯಕ್ಷ ಬಸವರಾಜ ದಿಡಗೂರ, ರಾಜ್ಯ ಪರಿಷತ್ ಸದಸ್ಯ ಪರಮೇಶ ಬಿ.ಜಿ., ಉಪಾಧ್ಯಕ್ಷರಾದ ಯಂಕಾನಂದ ಪೂಜಾರ, ಎಂ.ಎಫ್. ಬಿಂಗಿ, ಕುಮಾರ ಗುಡ್ಡಳ್ಳಿ, ಯಮುನಾ ಕೊನೇಸರ, ಹೊನ್ನಪ್ಪ ಬಾರ್ಕಿ ಇದ್ದರು.