ಕನ್ನಡಪ್ರಭ ವಾರ್ತೆ ವಿಜಯಪುರ
ವಿದ್ಯುತ್ ಇಲಾಖೆ ಖಾಸಗೀಕರಣ ವಿರೋಧಿಸಿ ಕವಿಪ್ರನಿನಿ ನೌಕರರ ಸಂಘ, ಹೆಸ್ಕಾಂ, ಎಂಜಿನಿಯರ್ಸ್ ಅಸೋಸಿಯೇಷನ್, ಎಸ್.ಸಿ./ಎಸ್.ಟಿ. ನೌಕರರ ಸಂಘ ಸೇರಿ ವಿವಿಧ ಸಂಘ-ಸಂಸ್ಥೆಗಳು ಹುವಿಸಕಂನಿ (ಹೆಸ್ಕಾಂ) ವಿಜಯಪುರ ವಿಭಾಗ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.ಪ್ರತಿಭಟನಾನಿರತರು ಮಾತನಾಡಿ, ವಿದ್ಯುತ್ ಕ್ಷೇತ್ರದ ಖಾಸಗೀಕರಣ ಸಾರ್ವಜನಿಕ ಹಿತಾಸಕ್ತಿ, ನೌಕರರ ಭದ್ರತೆ ಹಾಗೂ ಗ್ರಾಹಕರಿಗೆ ಒದಗಿಸಲಾಗುತ್ತಿರುವ ಸೇವೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರದ ಅಧೀನದಲ್ಲಿರುವ ವಿದ್ಯುತ್ ವಿತರಣಾ ವ್ಯವಸ್ಥೆ ಬಲಪಡಿಸುವ ಬದಲು ಖಾಸಗಿ ಕಂಪನಿಗಳಿಗೆ ಪರ್ಯಾಯ ಪರವಾನಗಿ ನೀಡುವುದು ಸಾರ್ವಜನಿಕ ವಲಯದ ಸಂಸ್ಥೆಗಳ ಅಸ್ತಿತ್ವಕ್ಕೆ ಧಕ್ಕೆ ತರುವ ಕ್ರಮವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೆಇಆರ್.ಸಿ ಗೆ ಸಲ್ಲಿಸಬೇಕಾದ ಆಕ್ಷೇಪಣಾ ಪತ್ರಗಳ ಕುರಿತು ನೌಕರರು ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಟಾಟಾ ಪವರ್ ಕಂಪನಿಯು ಪರ್ಯಾಯ ವಿತರಣಾ ಪರವಾನಗಿಗಾಗಿ ಸಲ್ಲಿಸಿರುವ ಅರ್ಜಿ ತಿರಸ್ಕರಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣಾ ಪತ್ರಗಳನ್ನು ಸಲ್ಲಿಸುವ ಮೂಲಕ ಪರ್ಯಾಯ ಪರವಾನಗಿ ಅರ್ಜಿ ತಿರಸ್ಕರಿಸುವಂತೆ ಒತ್ತಾಯಿಸಲು ಕರೆ ನೀಡಲಾಯಿತು.ಪ್ರತಿಭಟನೆಯಲ್ಲಿ ಹೆಸ್ಕಾಂ ಕಂಪನಿಯ ಉಪಾಧ್ಯಕ್ಷ ಪಿ.ಎಸ್. ಸಿಂಧೆ, ಕವಿಪ್ರನಿನಿ ನೌಕರರ ಸಂಘ (659) ದ ಕೇಂದ್ರ ಸಮಿತಿ ಸದಸ್ಯ ಎಚ್.ಎಲ್. ಸಂಖ, ವಿವಿಧ ಸಮಿತಿಗಳ ಸದಸ್ಯರಾದ ಗಂಗಾಧರ ಲೋಣಿ, ಚಂದು ಕೋಣೆಗೋಳ, ಕಾರ್ಯನಿರ್ವಾಹಕ ಅಭಿಯಂತರರಾದ ಸಂತೋಷ ಪಾಟೀಲ, ಜಗದೀಶ ಜಾಧವ, ಸುನಂದಾ ಜಂಬಗಿ, ಕವಿಪ್ರನಿನಿ ನೌಕರರ ಸಂಘದ ಅಧ್ಯಕ್ಷ ಸೋಮು ಹಿರೇಕುರುಬರ, ಕಾರ್ಯದರ್ಶಿ ಬಿ.ಆರ್. ರೇವತಗಾಂವ, ವಿವಿಧ ವಿಭಾಗಗಳ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಜಿ.ಎಸ್. ದೇಶಮುಖ, ಡಿ.ಎಂ. ಮೂಲಿಮನಿ, ಶೋಭಾ ಆಹೇರಿಕರ, ರೇಖಾ ತೋಟಿಗೇರ, ಭಾರತಿ ಪೂಜಾರ, ಕವಿಪ್ರನಿ ನೌಕರರ ಪತ್ತಿನ ಸಹಕಾರ ಸಂಘದ ಉಪಾದ್ಯಕ್ಷ ಬಿ.ಆರ್. ನರಗುಂದ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು, ಸಿಬ್ಬಂದಿ, ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.