ಲಕ್ಷ್ಮೇಶ್ವರ: ಪಟ್ಟಣದ ವಾರ್ಡ್ ನಂ. 1ರಲ್ಲಿನ ಕೌಡೇಶ್ವರಿ ಬಡಾವಣೆಯಲ್ಲಿ ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಕಳೆದ ಹಲವು ವರ್ಷಗಳಿಂದ ಪರದಾಡುತ್ತಿದ್ದರೂ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿ ಕೌಡೇಶ್ವರಿ ನಗರದಲ್ಲಿನ ಮಹಿಳೆಯರು ಹಾಗೂ ಮಕ್ಕಳು ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪುರಸಭೆ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಗಂಗಮ್ಮ ಗೊಜಗೊಜಿ ಮಾತನಾಡಿ, ಪಟ್ಟಣದ ವಾರ್ಡ್ ನಂ. 1ರಲ್ಲಿನ ನಿವಾಸಿಗಳು ಗೋಳು ಕೇಳುವವರು ಯಾರೂ ಇಲ್ಲವಾಗಿದೆ. ಕಳೆದ ಹಲವು ವರ್ಷಗಳಿಂದ ಇಲ್ಲಿ ರಸ್ತೆಗಳಿಲ್ಲ, ಚರಂಡಿ ಇಲ್ಲ, ಕುಡಿಯುವ ನೀರಂತೂ ದೇವರಿಗೆ ಪ್ರೀತಿ ಎನ್ನುವಂತಾಗಿದೆ. ಕಳೆದ ಒಂದು ತಿಂಗಳಿಂದ ಕುಡಿಯುವ ನೀರು ಬಂದಿಲ್ಲ. ಈ ಬಡಾವಣೆಯಲ್ಲಿ ರಾತ್ರಿಯಾದರೆ ಸಾಕು ಹಾವು- ಚೇಳುಗಳು ನಿರ್ಭೀತಿಯಿಂದ ಸಂಚರಿಸುತ್ತವೆ. ಇದರಿಂದಾಗಿ ಮಕ್ಕಳು ಮಹಿಳೆಯರು ಇಲ್ಲಿ ವಾಸ ಮಾಡುವುದು ನರಕಕ್ಕೆ ಸಮನಾಗಿದೆ. ಮಳೆಗಾಲದಲ್ಲಿ ಮಣ್ಣಿನ ರಸ್ತೆಗಳಲ್ಲಿ ಚರಂಡಿ ನೀರು ನಿಂತು ಇಲ್ಲಿ ಸಂಚಾರ ಮಾಡುವುದು ದುಸ್ತರವಾಗಿದೆ.ರೋಗ ರುಜಿನಗಳ ಭೀತಿ ಕಾಡುತ್ತಿದ್ದರೂ ಯಾರೊಬ್ಬರು ಕಣ್ಣೆತ್ತಿಯೂ ನೋಡುತ್ತಿಲ್ಲ. ಲಕ್ಷ್ಮೇಶ್ವರ ಪುರಸಭೆಯ ವ್ಯಾಪ್ತಿಗೆ ಈ ವಾರ್ಡ್ ಬರುತ್ತದೆಯೋ ಇಲ್ಲವೋ ತಿಳಿಯುತ್ತಿಲ್ಲ. ಶೀಘ್ರದಲ್ಲಿ ಅಧಿಕಾರಿಗಳು ಬಂದು ನಮ್ಮ ಸಮಸ್ಯೆಗೆ ಶಾಸ್ವತ ಪರಿಹಾರ ನೀಡುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ವಾರ್ಡನಲ್ಲಿ ಶೀಘ್ರದಲ್ಲಿ ರಸ್ತೆ, ಚರಂಡಿ ನಿರ್ಮಾಣ ಮಾಡುತ್ತೇವೆ. ಸದ್ಯ ಆಡಳಿತಾಧಿಕಾರಿಗಳು ಪುರಸಭೆಯ ಅಧಿಕಾರಿಗಳಾಗಿದ್ದು, ಅವರಿಂದ ಪರವಾನಗಿ ಪಡೆದು ಕೆಲಸ ಮಾಡಿಸುತ್ತೇವೆ ಎಂದರು.ಈ ವೇಳೆ ಹನುಮಂತಪ್ಪ ಬಾಲೆಹೊಸೂರ, ನಾಗಪ್ಪ ಪೂಜಾರ, ಲಕ್ಷ್ಮಣ ಮುಳಗುಂದ, ಮಲ್ಲಪ್ಪ ಬನ್ನಿ, ಮೈಲಾರೆಪ್ಪ ಕೋರಿ, ಮಂಜಪ್ಪ ಪಡಗೇರಿ, ಬಸಣ್ಣ ಉಳ್ಳಟ್ಟಿ, ಲಕ್ಷ್ಮವ್ವ ಉಳ್ಳಟ್ಟಿ, ದ್ಯಾಮವ್ವ ಗೊಜಗೊಜಿ, ರೇಣವವ್ವ ಗೊರವರ, ಶಿವಲೀಲಾ ಬನ್ನಿ, ಸಂಕವ್ವ ಮುಳಗುಂದ, ರೇಣವ್ವ ಪೂಜಾರ, ಜಯಮ್ಮ ಕುಷ್ಟಗಿ, ರೇಖಾ ಮುಳಗುಂದ, ರತ್ನವ್ವ ಹೊಸಗೌಡರ, ಗೌರಮ್ಮ ತಹಸೀಲ್ದಾರ, ಯಲ್ಲವ್ವ ಉಳ್ಳಟ್ಟಿ ಸೇರಿದಂತೆ ಅನೇಕರು ಇದ್ದರು.