ಸಾರಾಂಶ
ಸುರಪುರ ತಾಲೂಕಿನ ಕುಪಗಲ್, ಚಂದ್ಲಾಪುರ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘದ ವತಿಯಿಂದ ಜೆಸ್ಕಾಂ ಉಪ ವಿಭಾಗ ಸಹಾಯಕ ಕಿರಿಯ ಅಭಯಂತರರಿಗೆ ಮನವಿ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಸುರಪುರ
ತಾಲೂಕಿನ ಕುಪಗಲ್ ಮತ್ತು ಚಂದ್ಲಾಪುರ ಗ್ರಾಮಕ್ಕೆ ಸಮರ್ಪಕ ವಿದ್ಯುತ್ ಪೂರೈಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಸಮಿತಿಯಿಂದ ಪ್ರತಿಭಟಿಸಿ ಜೆಸ್ಕಾಂ ಉಪ ವಿಭಾಗ ಸಹಾಯಕ ಕಿರಿಯ ಅಭಯಂತರರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ತಾಲೂಕಿನ ಸೂಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸಬ್ ಸ್ಟೇಷನ್ ಮತ್ತು ಕಕ್ಕೇರಾ ಸಬ್ ಸ್ಟೇಷನ್‌ದಿಂದ ಸರಿಯಾದ ರೀತಿಯಲ್ಲಿ ವಿದ್ಯುತ್ ಸರಬರಾಜು ಆಗುತ್ತಿಲ್ಲ. ಮಳೆಗಾಳಿಗೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಸುಮಾರು 15 ದಿನಗಳಾದರೂ ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕುಪಗಲ್ ಮತ್ತು ಚಂದಲಾಪುರ ಗ್ರಾಮಗಳಲ್ಲಿ ವಿದ್ಯುತ್ ಪರಿವರ್ತಕ ಸುಟ್ಟು ಸುಮಾರು 15 ದಿನವಾಗಿದೆ. ಚಂದಲಾಪುರ ಗ್ರಾಮದಲ್ಲಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಜಮೀನಿನಲ್ಲಿರುವ ತೋಟಗಾರಿಕೆ ಬೆಳೆಗಳು ಒಣಗುತ್ತಿವೆ. ಈ ಕೂಡಲೇ ಸಮರ್ಪಕ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.ಸೂಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸಬ್ ಸ್ಟೇಷನ್‌ಗೆ ಒಬ್ಬರೇ ಲೈನ್ ಮ್ಯಾನ್ ನಿರ್ವಹಣೆ ಮಾಡುವುದು ಕಷ್ಟವಾಗುತ್ತಿದೆ. ಹೆಚ್ಚಿನ ಸಿಬ್ಬಂದಿ ಒದಗಿಸಿ ಪ್ರಸ್ತುತ ಸುಟ್ಟಿರುವ ಟಿಸಿ, ಮುರಿದು ಬಿದ್ದಿರುವ ವಿದ್ಯುತ್ ಕಂಬಗಳನ್ನು ದುರಸ್ತಿಪಡಿಸಬೇಕು. ಆ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿಳಂಬವಾದರೆ ರಸ್ತೆ ತಡೆದು ಉಗ್ರವಾದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ತಾಲೂಕು ಅಧ್ಯಕ್ಷ ಹಣಮಂತಾಯ ಚಂದಲಾಪುರ, ವೆಂಕಟೇಶಗೌಡ ಕುಪಗಲ್, ಮಲ್ಲಣ್ಣ ಹಾಲಭಾವಿ, ಇಮಾಮಸಾಬ್ ತಿಪ್ಪನಟಗಿ ಸೇರಿದಂತೆ ಇತರರಿದ್ದರು.