ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ

| Published : Sep 26 2025, 01:03 AM IST

ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೂ ಹಿತ ರಕ್ಷಣಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ರಾಜ್ಯ ಸರ್ಕಾರ ಕ್ರೈಸ್ತರನ್ನು ಹಿಂದು ಜಾತಿಗಳ ನಡುವೆ ಎಳೆದು ತರುತ್ತಿರುವುದನ್ನು ಸಂಪೂರ್ಣವಾಗಿ ಕೈ ಬಿಡುವಂತೆ ಆಗ್ರಹಿಸಿ ಹಿಂದೂ ಹಿತ ರಕ್ಷಣಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಚಂದ್ರ ಉಡೋತ್, ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆ ಹೆಸರಲ್ಲಿ ಹೊಸ ಕ್ರೈಸ್ತ ಜಾತಿಗಳನ್ನು ಸೃಷ್ಟಿಸಿ ಗೊಂದಲ ನಿರ್ಮಿಸುತ್ತಿದೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಹೊರಟಿರುವ ರಾಜ್ಯ ಸರ್ಕಾರ ಕ್ರೈಸ್ತರನ್ನು ಹಿಂದು ಜಾತಿಗಳ ನಡುವೆ ಎಳೆದು ತಂದು ಎಲ್ಲ ಸಮಾಜಗಳನ್ನು ದಿಕ್ಕು ತಪ್ಪಿಸುತ್ತಿದೆ. ಕರ್ನಾಟಕದಲ್ಲಿ ಜಾರಿಯಲ್ಲಿರುವ ಮತಾಂತರ ನಿರ್ಬಂಧ ಕಾಯ್ದೆಯನ್ನು ಸರ್ಕಾರವೇ ದುರ್ಬಲಗೊಳಿಸುತ್ತಿದೆ. ದಲಿತರೂ, ಒಬಿಸಿಯವರೂ ಸೇರಿದಂತೆ ಹಿಂದು ಜಾತಿಗಳನ್ನು ಒಡೆಯುವುದೇ ಅಹಿಂದ ರಾಜಕಾರಣದ ನೀತಿಯಾಗಿದೆ ಎಂದು ಆರೋಪಿಸಿದರು.

ಕುರುಬ ಕ್ರೈಸ್ತ, ಮಡಿವಾಳ ಕ್ರೈಸ್ತ, ಮಾದಿಗ ಕ್ರೈಸ್ತ, ಹೊಲೆಯ ಕ್ರೈಸ್ತ, ಲಿಂಗಾಯತ ಕ್ರೈಸ್ತ, ಒಕ್ಕಲಿಗ ಕ್ರೈಸ್ತ ಸೇರಿದಂತೆ 48 ಹೊಸ ಕ್ರೈಸ್ತ ಜಾತಿಗಳನ್ನು ಸಮೀಕ್ಷೆಯ ಹೆಸರಿನಲ್ಲಿ ಹುಟ್ಟುಹಾಕಿರುವ ಸರ್ಕಾರ ಕ್ಯಾಥೋಲಿಕ್, ಪ್ರೊಟೆಸ್ಟೆಂಟ್, ನ್ಯೂ ಲೈಫ್, ಬ್ಯಾಪ್ಟಿಸ್ಟ್ ಇತ್ಯಾದಿ ಕ್ರೈಸ್ತರ ಮೂಲ ಜಾತಿಗಳನ್ನು ಕೈಬಿಡಲಾಗಿದೆ. ವಿವಿಧ ಹಿಂದೂ ಸಮುದಾಯಗಳೊಂದಿಗೆ ಕ್ರೈಸ್ತ ಹೆಸರು ಸೇರಿಸಿರುವುದಕ್ಕೆ ಕ್ರೈಸ್ತ ಮತದ ಪೋಪ್ ಹಾಗೂ ಇತರ ಮುಖಂಡರು ತಮ್ಮ ಅಭಿಪ್ರಾಯ ತಿಳಿಸಬೇಕು ಎಂದರು.

ಕಾಂತರಾಜು ಆಯೋಗ, ನಾಗಮೋಹನ್ ದಾಸ್ ಆಯೋಗದ ವರದಿಯನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿರುವ ಸರ್ಕಾರ ಸಾಮಾಜಿಕ ನ್ಯಾಯದ ವಿಷಯವನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ. ಸರ್ಕಾರ ವಿಶ್ವಾಸಾರ್ಹತೆ ಕಳೆದುಕೊಂಡಿದೆ. ಎಲ್ಲ ಜಾತಿ, ಸಮುದಾಯದವರು ಆಕ್ಷೇಪ ದಾಖಲಿಸುತ್ತಿದ್ದಾರೆ. ಸರ್ಕಾರದ ನಿರ್ಲಕ್ಷದ ವಿರುದ್ಧ ಜನಾಕ್ರೋಶ ಸ್ಫೋಟಿಸುವ ದಿನ ದೂರವಿಲ್ಲ ಎಂದರು.

ಈ ಸಂದರ್ಭ ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ರವಾನಿಸಲಾಯಿತು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಕಾರಿಣಿ ಸದಸ್ಯ ಅಜಿತ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಕುಮಾರ್, ಭವನ್, ಶರತ್, ಮಡಿಕೇರಿ ತಾಲೂಕು ಸಂಯೋಜಕ ಅಪ್ಪು ರೈ, ವಿರಾಜಪೇಟೆ ತಾಲೂಕು ಸಂಯೋಜಕ ಅನಿಲ್, ಸೋಮವಾರಪೇಟೆ ತಾಲೂಕು ಸಂಯೋಜಕ ಉಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಕಾಳಪ್ಪ, ಪ್ರಮುಖರಾದ ಶಾಂತೆಯಂಡ ರವಿಕುಶಾಲಪ್ಪ, ಕೆ.ಎಸ್.ರಮೇಶ್, ಎಸ್.ಸಿ.ಸತೀಶ್, ಕವನ್ ಕಾವೇರಪ್ಪ ಇತರರು ಇದ್ದರು.