ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡಬೇಕು.
ಸಿರುಗುಪ್ಪ: ತಾಲೂಕಿನ ಕರೂರು ಗ್ರಾಮದ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ಶಿಕ್ಷಕರ ಕೊರತೆ ಖಂಡಿಸಿ ಮಂಗಳವಾರ ಎಸ್‌ಡಿಎಂಸಿ ಸದಸ್ಯರು, ಪಾಲಕರು, ಪೋಷಕರು, ಶಿಕ್ಷಣ ಅಭಿಮಾನಿಗಳು ಶಾಲೆ ಮುಂದೆ ಪ್ರತಿಭಟನೆ ನಡೆಸಿದರು.
ಗ್ರಾಮದ ಯುವಕ ತಿಮ್ಮ ರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರನ್ನು ನೇಮಕ ಮಾಡಬೇಕು. ಸಮರ್ಪಕ ಸಂಖ್ಯೆಯಲ್ಲಿ ಶಿಕ್ಷಕರಿಲ್ಲದ ಕಾರಣ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ. ಶಾಲೆಯಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಎಲ್‌ಕೆಜಿ ತರಗತಿಯಿಂದ 7ನೇ ತರಗತಿವರೆಗೆ 246 ಮಕ್ಕಳು ಇದ್ದಾರೆ. ಶಿಕ್ಷಕರ ಕೊರತೆಯಿಂದ ಮಕ್ಕಳ ಪಾಠ ಪ್ರವಚನವು ಸಮರ್ಪಕವಾಗಿ ನಡೆಯುತ್ತಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲೆ ಬಾರಿ ದುಷ್ಪರಿಣಾಮ ಬೀರುತ್ತಿದೆ. ಇನ್ನು 30 ರಿಂದ 40 ಮಕ್ಕಳು ಈ ಶಾಲೆಗೆ ಸೇರಲಿದ್ದಾರೆ. ಕಾಯಂ ಶಿಕ್ಷಕರನ್ನು ಕೊಡಲು ಕ್ರಮ ತೆಗೆದುಕೊಳ್ಳಬೇಕು. ಇನ್ನಿಬ್ಬರು ಅತಿಥಿ ಶಿಕ್ಷಕರನ್ನು ನೇಮಿಸಬೇಕೆಂದು ಶಾಲೆಯ ಶಿಕ್ಷಕರ ಕೊರತೆಯ ವಿಚಾರದ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ಅನೇಕ ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಶಿಕ್ಷಕರ ನೇಮಕ ಮಾಡದಿದ್ದರೆ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ನಡೆಸಲಾಗುವುದೆಂದು ಹೇಳಿದರು.
ಮುಖ್ಯಗುರು ರೇಣುಕಾ ಮಾತನಾಡಿ, ಶಿಕ್ಷಕರ ನೇಮಕದ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.ಪ್ರತಿಭಟನಾನಿರತರೊಂದಿಗೆ ಮೊಬೈಲ್ ಕರೆ ಮಾಡಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಗುರಪ್ಪ, ಮಕ್ಕಳ ಭವಿಷ್ಯಕ್ಕಾಗಿ ತಾವೆಲ್ಲರೂ ಸ್ಪಂದಿಸಬೇಕು. ಇಲಾಖೆಯ ನಿಯಮಾನುಸಾರ ಶಿಕ್ಷಕರ ಕೊರತೆಯ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಎಸ್‌ಡಿಎಂಸಿ ಅಧ್ಯಕ್ಷ ಜಿ.ವಿರೂಪಾಕ್ಷಿ ರೆಡ್ಡಿ, ಗ್ರಾಮಸ್ಥರಾದ ಎಸ್.ಬಸವರಾಜ್ ರೆಡ್ಡಿ, ಮಹಾಂತೇಶ, ಕೃಷ್ಣ ರೆಡ್ಡಿ, ಕುಶಲ್ ರೆಡ್ಡಿ, ರಾಘವೇಂದ್ರ ರೆಡ್ಡಿ, ಶ್ರೀಕಾಂತ, ಗುರುಪಾದ, ಪ್ರಹ್ಲಾದ ಶ್ರೀನಿವಾಸ ರೆಡ್ಡಿ ಇದ್ದರು.ಸಿರುಗುಪ್ಪ ತಾಲೂಕಿನ ಕರೂರುಗ್ರಾಮದ ಸರ್ಕಾರಿ ಹಿರಿಯ ಮಾದರಿಪ್ರಾಥಮಿಕ ಶಾಲೆಗೆ ಶಿಕ್ಷಕರ ಕೊರತೆಯನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು.