ಕಾಂತರಾಜ ವರದಿ ಅನುಷ್ಠಾನಕ್ಕೆ ಆಗ್ರಹಿಸಿ ಕಾರವಾರದಲ್ಲಿ ಪ್ರತಿಭಟನೆ

| Published : Jan 19 2024, 01:47 AM IST

ಸಾರಾಂಶ

೨೦೧೫-೧೬ನೇ ಸಾಲಿನಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಜಾತಿಯ ಬಗ್ಗೆ ಸಮೀಕ್ಷೆ ಮಾಡಿಸಲು ನೂರಾರು ಕೋಟಿ ರುಪಾಯಿ ಹಣ ಖರ್ಚು ಮಾಡಲಾಗಿದೆ. ಈಗ ಈ ವರಿದಿ ಜಾರಿಗೊಳಿಸಬಾರದು ಎಂದು ಲಿಂಗಾಯಿತರು, ಒಕ್ಕಲಿಗರು ವಿರೋಧಿಸುತ್ತಿದ್ದಾರೆ.

ಕಾರವಾರ:ರಾಜ್ಯ ಸರ್ಕಾರದಿಂದ ಕಾಂತರಾಜ ನೇತೃತ್ವದಲ್ಲಿ ಆಯೋಗ ರಚಿಸಿ ಸರ್ವೇ ನಡೆದಿದ್ದು, ಈ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಗುರುವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.೨೦೧೫-೧೬ನೇ ಸಾಲಿನಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಜಾತಿಯ ಬಗ್ಗೆ ಸಮೀಕ್ಷೆ ಮಾಡಿಸಲು ನೂರಾರು ಕೋಟಿ ರುಪಾಯಿ ಹಣ ಖರ್ಚು ಮಾಡಲಾಗಿದೆ. ಈಗ ಈ ವರಿದಿ ಜಾರಿಗೊಳಿಸಬಾರದು ಎಂದು ಲಿಂಗಾಯಿತರು, ಒಕ್ಕಲಿಗರು ವಿರೋಧಿಸುತ್ತಿದ್ದಾರೆ. ಈ ಎರಡು ಜಾತಿಯ ಮಠ ಕಟ್ಟುವಲ್ಲಿ ಮತ್ತು ಜಾತಿ ಹೆಸರಿನ ಮೇಲೆ ಶಿಕ್ಷಣ ಸಂಸ್ಥೆ ತೆರೆಯುವಾಗ, ಚುಣಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೇಳುವಾಗ, ಎಂಎಲ್‌ಎ, ಸಂಸದ, ಮಂತ್ರಿಯಾಗುವ ವೇಳೆ ಜಾತಿಯ ಹೆಸರು ಹೇಳಿ ಸೌಲಭ್ಯ ಮತ್ತು ಹಕ್ಕುಗಳನ್ನು ಪಡೆಯುತ್ತಾರೆ. ಆದರೆ ಈಗ ಜಾತಿ ಸಮೀಕ್ಷೆ ವರದಿ ವಿರೋಧಿಸುವುದು ಎಷ್ಟು ಸೂಕ್ತ? ಇದನ್ನು ದಲಿತ ಸಂಘರ್ಷ ಸಮಿತಿಯಿಂದ ಖಂಡಿಸುತ್ತೇವೆ ಎಂದರು.ಅಧಿಕಾರ ಮತ್ತು ಸೌಲಭ್ಯಗಳು ಅವರಿಗೆ ಜನಸಂಖ್ಯೆ ಆಧಾರದ ಮೇಲೆ ಹಂಚಿಕೆ ಆದರೆ ಕಡಿಮೆ ಸ್ಥಾನಮಾನ, ಸೌಲಭ್ಯ ಸಿಗುತ್ತೇವೆ ಎನ್ನುವ ಉದ್ದೇಶದಿಂದ ಲಿಂಗಾಯಿತ, ಒಕ್ಕಲಿಗ ಸಮುದಾಯದವರು ಕಾಂತರಾಜ ವರದಿಗೆ ವಿರೋಧಿಸುತ್ತಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯಿತ, ಒಕ್ಕಲಿಗರ ಯಾವುದೇ ವಿರೋಧವನ್ನು ಗಣನೆಗೆ ತೆಗೆದುಕೊಳ್ಳದೆ ಗಣತಿ ವರದಿ ಜಾರಿಮಾಡಬೇಕು ಎಂದು ಆಗ್ರಹಿಸಿದರು.ಕಲ್ಲಡಕ ಪ್ರಭಾಕರ ಭಟ್ಟ ಶ್ರೀರಂಗಪಟ್ಟಣದ ಕಾರ್ಯಕ್ರಮ ಒಂದರಲ್ಲಿ ಹೆಣ್ಣು ಕುಲಕ್ಕೆ ಅವಮಾನ, ಅಪಮಾನ ಮಾಡಿ ಘನತೆ, ಗೌರವ ಹಾಳು ಮಾಡಿದ್ದಾರೆ. ಜತೆಗೆ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುತ್ತಿರುವ ಮತ್ತು ಶಾಂತಿಗೆ ಭಂಗ ತಂದು ಹೆಣ್ಣು ಮಕ್ಕಳ ಅಪಮಾನ ಮಾಡಿದ ಭಟ್ಟ ಅವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕೀರಪ್ಪ, ಮುಂಡಗೋಡ ನಗರ ಸಂಚಾಲಕ ಹುಲಿಗಪ್ಪ ಬೋವಿವಡ್ಡರ, ಬಸವರಾಜ ಹಳದಮ್ಮನವರ, ಗೋಪಾಲ ನಡಕಿನಮನಿ, ಸಂತೋಷ ಕಟ್ಟಿಮನಿ ಇದ್ದರು.