ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಇಬ್ಬರು ಪತ್ರಕರ್ತರನ್ನು ಅಕ್ರಮವಾಗಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸುವ ಮೂಲಕ ಮಾನಸಿಕವಾಗಿ ದೌರ್ಜನ್ಯ ನಡೆಸಿದ ಪ್ರಕರಣವನ್ನು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರು ಖಂಡಿಸಿದರು.ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರಿಗೆ ಮನವಿ ಸಲ್ಲಿಸಿ ಅಕ್ರಮವಾಗಿ ವಶಕ್ಕೆ ಪಡೆದ ಪೊಲೀಸ್ ಅಧಿಕಾರಿಗಳು ಹಾಗೂ ಪೇದೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ರಾಜ್ಯ ಮಟ್ಟದ ಪತ್ರಿಕೆಯ ಜಿಲ್ಲಾ ವರದಿಗಾರ ಹಾಗೂ ಪ್ರಾದೇಶಿಕ ಪತ್ರಿಕೆಯ ಜಿಲ್ಲಾ ವರದಿಗಾರರ ಮೇಲೆ ಸಮನ್ಸ್ ನೀಡದೆ ಹಾಗೂ ಬಂಧನದ ವಾರಂಟ್ ಇಲ್ಲದೆ ಅಕ್ರಮವಾಗಿ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಇದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಂ ಮಾತನಾಡಿ, ಇಬ್ಬರು ಪತ್ರಕರ್ತರು ಯಾವುದೇ ಕೊಲೆ ಆರೋಪಿಯಲ್ಲ. ಆದರೂ ಸಹ ಪೊಲೀಸರು ಅವರನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಎಷ್ಟು ಸರಿ?, ನ್ಯಾಯಾಲಯವೇ ಅವರಿಗೆ ಸಮನ್ಸನ್ನು ಸೆಪ್ಟಂಬರ್ ತಿಂಗಳಿಗೆ ಹೊರಡಿಸಿದ್ದರೂ ಸಹ ಯಾರ ಒತ್ತಡದ ಮೇಲೆ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದೀರಾ ಎಂದು ಪ್ರಶ್ನಿಸಿದರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲೆಯ ಪತ್ರಕರ್ತರು ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಇನ್ನು ಮುಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯಾವುದೇ ಕಾರ್ಯಕ್ರಮ ನಡೆದರೂ ಕಪ್ಪುಪಟ್ಟಿ ಧರಿಸಿ ಮೌನ ಹೋರಾಟ ಮಾಡುತ್ತೇವೆ. ಪೊಲೀಸರು ಈ ಕೂಡಲೇ ತಪ್ಪಿತಸ್ಥ ಪೊಲೀಸರ ಮೇಲೆ ಕ್ರಮ ಕೈಗೊಳ್ಳದಿದ್ದರೆ, ಈ ರೀತಿಯ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಸಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್ ಮಾತನಾಡಿ, ಪತ್ರಕರ್ತರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಯಾವ ಒತ್ತಡವಿತ್ತು ಎಂಬುದನ್ನು ಪೊಲೀಸರು ಬಹಿರಂಗ ಪಡಿಸಬೇಕು. ಇವರ ವಿರುದ್ಧ ಮಾನಹಾನಿ ಪ್ರಕರಣ ದಾಖಲಾಗಿತ್ತು. ಆದರೆ, ಯಾರೋ ಒಬ್ಬರ ಒತ್ತಡದ ಮೇಲೆ ಇವರ ವಿರುದ್ಧ ಪೊಲೀಸರು ಅಮಾನುಷವಾಗಿ ವರ್ತಿಸಿದ್ದಾರೆ. ಇದರ ಹಿಂದೆ ಇರುವ ಒತ್ತಡ ಮತ್ತು ಕೈವಾಡದ ಬಗ್ಗೆ ತಿಳಿಸಬೇಕು ಎಂದು ಪಟ್ಟು ಹಿಡಿದರು.
ಸಂಘದ ಮನವಿ ಸ್ವೀಕರಿಸಿದ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕಳೆದ ಹಲವು ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ನಾನು ಪತ್ರಕರ್ತರ ಮೇಲೆ ಅಪಾರ ಗೌರವ ಇಟ್ಟುಕೊಂಡಿದ್ದೇನೆ. ಯಾರೋ ಒಬ್ಬ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ಲೋಪದಿಂದ ಇಷ್ಟೆಲ್ಲ ಬೆಳವಣಿಗೆ ನಡೆದಿದೆ. ಇದು ಖಂಡನೀಯವಾಗಿದ್ದು, ಮುಂದೆ ಈ ರೀತಿಯ ಘಟನೆಗಳು ಮರು ಕಳಿಸದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಪಿ.ಪ್ರಕಾಶ್, ಉಪಾಧ್ಯಕ್ಷ ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆನಂದ್, ರಾಜ್ಯ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಮಾಜಿ ಅಧ್ಯಕ್ಷರಾದ ಎಸ್.ಕೃಷ್ಣಸ್ವರ್ಣಸಂದ್ರ, ಕೆ.ಎನ್.ರವಿ, ನವೀನ್ ಚಿಕ್ಕಮಂಡ್ಯ, ಕಾರ್ಯದರ್ಶಿ ಲೋಕೇಶ್ ಚಿನಕುರಳಿ, ರಾಷ್ಟ್ರೀಯ ಮಂಡಳಿ ಸದಸ್ಯ ಜೆ.ಎಂ.ಬಾಲಕೃಷ್ಣ, ಹಿರಿಯ ಪತ್ರಕರ್ತ ಬಸವರಾಜ ಹೆಗ್ಗಡೆ, ನಿರ್ದೇಶಕರಾದ ಶ್ರೀನಿವಾಸ್, ಆನಂದ್, ನಂದನ್, ಚನ್ನಮಾದೇಗೌಡ, ರಾಘವೇಂದ್ರ, ನಾಗೇಶ್, ಪ್ರಶಾಂತ್, ಅಶೋಕ್, ಮದ್ದೂರು ಪುಟ್ಟಸ್ವಾಮಿ, ಶ್ರೀರಂಗಪಟ್ಟಣ ಗಂಜಾಂ ಮಂಜು, ಅಣ್ಣೂರು ಸತೀಶ್, ಮಳವಳ್ಳಿಯ ಲಿಂಗರಾಜು, ಬೆಳಕವಾಡಿ ಉಮೇಶ್ ಸೇರಿದಂತೆ ನೂರಾರು ಪತ್ರಕರ್ತರು ಭಾಗವಹಿಸಿದ್ದರು.