ರಾಜಾ ಅಮರೇಶ್ವರ ವಿರುದ್ಧ ಗೋ ಬ್ಯಾಕ್ ಘೋಷಣೆ

| Published : Mar 28 2024, 12:46 AM IST

ಸಾರಾಂಶ

ಮಾಜಿ ಸಂಸದ ಬಿ.ವಿ.ನಾಯಕಗೆ ಟಿಕೆಟ್ ಕೈತಪ್ಪಿದ್ದಕ್ಕೆ ಅಭಿಮಾನಿಗಳು ರಾಯಚೂರಿನ ಗಾಂಧಿ ವೃತ್ತದ ಸಮೀಪದ ಮುಖ್ಯರಸ್ತೆಯಲ್ಲಿ ಮೈಮೇಲೆ ಡೀಸೆಲ್‌ ಸುರಿದುಕೊಂಡು ಹೈಡ್ರಾಮಾ ನಡೆಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ಸಮರ್ಥರಾಗಿರುವ ಮಾಜಿ ಸಂಸದ ಬಿ.ವಿ.ನಾಯಕಗೆ ಬಿಜೆಪಿಯಿಂದ ಟಿಕೆಟ್‌ ಕೈತಪ್ಪಿರುವುದು ಹಾಗೂ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕಗೆ ಮತ್ತೊಮ್ಮೆ ಟಿಕೆಟ್‌ ನೀಡಿರುವುದನ್ನು ಖಂಡಿಸಿ ರಾಜಾ ಅಮರೇಶ್ವರ ನಾಯಕ ವಿರುದ್ಧ ಗೋ ಬ್ಯಾಕ್‌ ಘೋಷಣೆ, ದಿಢೀರ್‌ ಪ್ರತಿಭಟನೆ, ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶದ ಜೊತೆಗೆ ಬಿ.ವಿ.ನಾಯಕ ಅಭಿಮಾನಿಗಳು ಡೀಸೆಲ್‌ ಸುರಿದುಕೊಂಡು ಹೈಡ್ರಾಮ ನಡೆಸಿದ ಘಟನೆಗಳು ಬುಧವಾರ ಜರುಗಿದವು.

ಬಿಜೆಪಿಯಿಂದ ಟಿಕೆಟ್‌ ಸಿಗದ ಕಾರಣಕ್ಕೆ ಸ್ಥಳೀಯ ಗಾಂಧಿ ವೃತ್ತದ ಸಮೀಪದಲ್ಲಿರುವ ಖಾಸಗಿ ಹಬ್‌ನಲ್ಲಿ ಬಿ.ವಿ.ನಾಯಕ ಅವರ ಕಾರ್ಯಕರ್ತರು, ಹಿತೈಷಿಗಳು, ಅಭಿಮಾನಿಗಳ ಚಿಂತನ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆ ಆರಂಭದಿಂದ ಮುಗಿಯುವ ತನಕ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ವಿರುದ್ಧ ಗೋ ಬ್ಯಾಕ್‌ ಘೋಷಣೆಗಳು ಮೊಳಗಿದವು. ನಂತರ ಮುಖ್ಯರಸ್ತೆ ಮೇಲೆ ಸೇರಿದ ಅಭಿಮಾನಿಗಳು ದಿಢೀರ್‌ ಪ್ರತಿಭಟನೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಸಭೆ ಮುಗಿಸಿಕೊಂಡು ಹೊರಗಡೆ ಬರುತ್ತಿದ್ದ ಬಿ.ವಿ.ನಾಯಕರನ್ನು ಕಂಡ ಅಭಿಮಾನಿಗಳಾದ ಶಿವಮೂರ್ತಿ ಹಾಗೂ ರಾಘವೇಂದ್ರ ಅವರು ಮೈಮೇಲೆ ಡೀಸೆಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದಂತಹ ಘಟನೆ ನಡೆಯಿತು. ಡೀಸೆಲ್‌ ಮೈಮೇಲೆ ಸುರಿದುಕೊಳ್ಳುತ್ತಿದ್ದಂತೆ ಅಕ್ಕ-ಪಕ್ಕದ ಕಾರ್ಯಕರ್ತರು ಆ ಇಬ್ಬರನ್ನು ತಡೆದು ಸಮೀಪದ ಟೈರಿಗೆ ಹಚ್ಚಿದ್ದ ಬೆಂಕಿ ಕಡೆಗೆ ಹೋಗದಂತೆ ಅವರನ್ನು ಪಕ್ಕಕ್ಕೆ ಎಳೆದುಕೊಂಡು ಹೋದರು. ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

ರಾಯಚೂರು ಗಾಂಧಿವೃತ್ತದ ಸಮೀಪದ ಖಾಸಗಿ ಹಬ್‌ನಲ್ಲಿ ಬಿಜೆಪಿ ಅಸಮಾಧಾನಿತ ಕಾರ್ಯಕರ್ತರ ಸಭೆಯಿಂದಾಗಿ ಮುಖ್ಯರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಸಮಸ್ಯೆ ಉಂಟಾಗಿತ್ತು. ಆಕ್ರೋಶಗೊಂಡ ಕಾರ್ಯಕರ್ತರು ರಸ್ತೆಗಿಳಿದು ಪ್ರತಿಭಟನೆ ನಡೆಸಿ, ಟೈರ್‌ಗೆ ಬೆಂಕಿ ಹಚ್ಚಿದ್ದು ಹಾಗೂ ಮೈಮೇಲೆ ಡೀಸೆಲ್‌ ಸುರಿದುಕೊಂಡು ನಡೆಸಿದ ಹೈಡ್ರಾಮಾದಿಂದಾಗಿ ಟ್ರಾಫಿಕ್‌ ಜಾಮಾಗಿ ಬಿರುಬಿಸಿಲಿನಲ್ಲಿ ವಾಹನ ಸವಾರರು, ಪಾದಾಚಾರಿಗಳು ಸಮಸ್ಯೆ ಅನುಭವಿಸಿದರು.