ಕಾರ್ಯಪಾಲಕ ಅಭಿಯಂತರ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಅವರ ಅತಿಯಾದ ಭ್ರಷ್ಟಚಾರದಿಂದಾಗಿ ಕಳೆದ ಒಂದು ವಾರದಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಮರೆಯಾಗಿದೆ.
ಭ್ರಷ್ಟಾಚಾರದಿಂದಾಗಿ ಚೆಸ್ಕಾಂ ವ್ಯವಸ್ಥೆ ಹದಗೆಟ್ಟಿದೆ: ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್
ಕನ್ನಡಪ್ರಭವಾರ್ತೆ, ಸಕಲೇಶಪುರ
ಅಧಿಕಾರಿಗಳ ಅತಿಯಾದ ಭ್ರಷ್ಟಾಚಾರದಿಂದಾಗಿ ತಾಲೂಕಿನ ಚೆಸ್ಕಾಂ ವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಆರೋಪಿಸಿದರು.
ಗುರುವಾರ ಚೆಸ್ಕಾ ಕಚೇರಿ ಒಳಾಂಗಣದಲ್ಲೆ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿ ಮಾತನಾಡಿ, ಕಾರ್ಯಪಾಲಕ ಅಭಿಯಂತರ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಅವರ ಅತಿಯಾದ ಭ್ರಷ್ಟಚಾರದಿಂದಾಗಿ ಕಳೆದ ಒಂದು ವಾರದಿಂದ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಣ್ಮರೆಯಾಗಿದೆ. ಈ ಸಂಬಂಧ ದೂರು ನೀಡಲು ಕರೆ ಮಾಡಿದರೂ ಸ್ವೀಕರಿಸುವುದಿಲ್ಲ. ಸ್ವೀಕರಿಸಿದರು ಉಡಾಫೆಯಿಂದ ಮಾತನಾಡುತ್ತಾರೆ. ಅಲ್ಲದೆ ತಾಲೂಕಿನ ಚೆಸ್ಕಾಂ ವಿಭಾಗದಲ್ಲಿ ಬರುವ ದೊಡ್ಡ ಕಾಮಗಾರಿಗಳನ್ನು ಕಮಿಷನ್ ಪಡೆದು ಹೊರಭಾಗದ ಗುತ್ತಿಗೆದಾರರಿಗೆ ನೀಡುತ್ತಿದ್ದಾರೆ. ಇದರಿಂದಾಗಿ ಮಳೆಗಾಲದಲ್ಲಿ ಮುರಿದ ವಿದ್ಯುತ್ ಕಂಬ ದುರಸ್ತಿಪಡಿಸಲು ಸ್ಥಳೀಯ ವಿದ್ಯುತ್ ಗುತ್ತಿಗೆದಾರರು ಲಭ್ಯವಾಗದ ಕಾರಣ ವಾರಗಳೆ ಕಳೆದರೂ ಗ್ರಾಮೀಣ ಭಾಗಕ್ಕೆ ವಿದ್ಯುತ್ ನೀಡಲಾಗುತ್ತಿಲ್ಲ. ಆದ್ದರಿಂದ ಸರ್ಕಾರ ಈ ಇಬ್ಬರು ಅಧಿಕಾರಿಗಳ ವಿರುದ್ಧ ಲೋಕಯುಕ್ತರಿಂದ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಈ ಪ್ರತಿಭಟನೆ ಕೇವಲ ಆರಂಭವಷ್ಟೆ. ನಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿ, ಮನವಿಯನ್ನು ಇಂಧನ ಸಚಿವರಿಗೆ ಫ್ಯಾಕ್ಸ್ ಮೂಲಕ ಕಳುಹಿಸಿಕೊಟ್ಟರು.ಈ ವೇಳೆ ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಪ್ರೇಮನಾಥ್, ನಗರ ಪ್ರಾಧಿಕಾರದ ಸದಸ್ಯರಾದ ದೇವರಾಜ್, ಚರಣ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ----------------
ಸಕಲೇಶಪುರ ಚೆಸ್ಕಾಂ ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಪ್ರತಿಭಟನೆ ನಡೆಸಿದರು.