ಸಾರಾಂಶ
ಕನ್ನಡಪ್ರಭ ವಾರ್ತೆ ಸವದತ್ತಿ
ಎಸ್‌ಸಿಪಿ, ಎಸ್‌ಟಿಪಿ ಮೀಸಲು ಹಣವನ್ನು ದುರ್ಬಳಕೆ ಮಾಡಿ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ನೀಡಿ ಉಳಿದ ಸಮುದಾಯದವರಿಗೆ ಅನ್ಯಾಯ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪಟ್ಟಣದ ಎಪಿಎಂಸಿ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.ಗುತ್ತಿಗೆ ಮೀಸಲಾತಿ ನೀಡಲು ಸಂವಿಧಾನ ತಿದ್ದುಪಡಿ ಮಾಡಿಯಾದರೂ ಜಾರಿ ಮಾಡಲಾಗುತ್ತದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿಕೆಯನ್ನು ಪ್ರತಿಭಟನೆಯಲ್ಲಿ ಖಂಡಿಸಲಾಯಿತು. ಬಿಜೆಪಿ ನಾಯಕ ಜಗದೀಶ ಶಿಂತ್ರಿ ಮಾತನಾಡಿ, ಒಂದು ಕೋಮಿನವರನ್ನು ಮಾತ್ರ ಓಲೈಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರವು ಉಳಿದ ಸಮುದಾಯಗಳಿಗೆ ದ್ರೋಹ ಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಡಾ.ನಯನಾ ಭಸ್ಮೆ ಮಾತನಾಡಿ, ಗುತ್ತಿಗೆ ನೀಡುವಲ್ಲಿ ಮುಸ್ಲಿಮರಿಗೆ ಶೇ.4ರಷ್ಟನ್ನು ಮೀಸಲಿಡಲು ಇಂದಿನ ಸರ್ಕಾರದ ಉಪ ಮುಖ್ಯಮಂತ್ರಿ ಡಿಕೆಶಿಯವರು ಸಂವಿಧಾನವನ್ನೇ ಬದಲಿಸಲು ಹೊರಟಿರುವುದು ವಿಪರ್ಯಾಸದ ಸಂಗತಿ ಎಂದು ಕಿಡಿಕಾರಿದರು. ಎಪಿಎಂಸಿ ವೃತ್ತದಲ್ಲಿ ಡಿ.ಕೆ.ಶಿವಕುಮಾರ ಪ್ರತಿಕೃತಿ ದಹನ ಮಾಡುವ ಮೂಲಕ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ದಿಕ್ಕಾರ ಘೋಷಿಸಿದರು.ಪ್ರತಿಭಟನೆಯಲ್ಲಿ ಜಗದೀಶ ಕೌಜಗೇರಿ, ಕುಮಾರಸ್ವಾಮಿ ತಲ್ಲೂರಮಠ, ರಾಜು ನಿಡವಣಿ, ಈರಣ್ಣ ಚಂದರಗಿ, ಮಲ್ಲೇಶ ಸುಳೇಭಾವಿ, ಶಾಲಿನಿ ಈಳಿಗೇರ, ಮೈತ್ರಾ ಹೊಂಗಲ, ಗುರುನಾಥ ಗಂಗಲ, ಮಹಾದೇವ ಮುರಗೋಡ, ಮಲ್ಲಿಕಾರ್ಜುನ ಬೀಳಗಿ, ಉಮೇಶ ಭೀಮನ್ನವರ, ಬಸವರಾಜ ಶಿಗ್ಗಾಂವಿ, ಸಂಜು ಉಡಕೇರಿ, ಪ್ರಕಾಶ ಲಮಾಣಿ, ರಾಜು ಲಮಾಣಿ, ಮಹಾಂತೇಶ ಸುಬೇದಾರ, ಪುಂಡಲೀಕ ಮಾದರ, ಸಂಗಪ್ಪ ಮಜ್ಜಗಿ, ಸಿದ್ದನಗೌಡ ಪಾಟೀಲ, ಸಿಂಗಣ್ಣ ಚಿನಿವಾಲರ, ಶರಣು ಮೇಟಿ ಮತ್ತು ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.