ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಳ್ಳಕೆರೆ ತಾಲೂಕು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೆ.ಡಿ.ಕೋಟೆಯಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿಲ್ಲ. ದೌರ್ಜನ್ಯ ನಡೆದು ಮೂರು ದಿನಗಳು ಕಳೆದರೂ ಜಿಲ್ಲಾಧಿಕಾರಿಗಳು ಅತ್ತ ತಿರುಗಿ ನೋಡಿಲ್ಲ ಎಂದು ಆರೋಪಿಸಿ ಸಂತ್ರಸ್ಥರು ಹಾಗೂ ದಲಿತ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಸೋಮವಾರ ಸುರಿವ ಮಳೆಯಲ್ಲಿಯೇ ಧರಣಿ ನಡೆಸಿದರು.ಗ್ರಾಮದಲ್ಲಿ ಸೋಮವಾರ ಶಾಂತಿಸಭೆ ನಡೆಸಿ ಸೌಹಾರ್ದತೆ ನಿರ್ಮಿಸಬೇಕು ಎಂದು ಅಧಿಕಾರಿಗಳು ಪ್ರಯತ್ನಿಸಿದ್ದರು. ಇದಕ್ಕೆ ಒಪ್ಪದ ಸಂತ್ರಸ್ಥರು ಜಿಲ್ಲಾಡಳಿತದ ತಟಸ್ಥ ಧೋರಣೆಗೆ ಬೇಸತ್ತು ಚಿತ್ರದುರ್ಗಕ್ಕೆ ಆಗಮಿಸಿ ಪ್ರತಿಭಟಿಸಿದರು. ಮಹಿಳೆಯರು ಸುರಿವ ಮಳೆಯಲ್ಲೇ ಉರುಳುತ್ತಾ ತಮ್ಮ ಗೋಳು ತೋಡಿಕೊಳ್ಳುತ್ತಿರುವುದು ಕಂಡು ಬಂದಿತು.
ಸ್ಥಳಕ್ಕೆ ಬಂದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮನವಿ ಸ್ವೀಕರಿಸದೆ ವಾಪಾಸ್ಸಾದರು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದು ವಾಪಾಸ್ ಕಳುಹಿಸಿದರು.ಹಲ್ಲೆ ನಡೆಸಿರುವ ಆರೋಪಿಗಳನ್ನು ರಕ್ಷಿಸುವ ಕಡೆಗೆ ಪೋಲೀಸ್ ಮತ್ತು ಕಂದಾಯ ಅಧಿಕಾರಿಗಳು ಸಂಚು ನಡೆಸಿದ್ದಾರೆ. ಎಫ್ಐಆರ್ ಆಗಿದ್ದರೂ ಆರೋಪಿಗಳು ರಾಜಾರೋಷವಾಗಿ ಮೀಸೆ ತಿರುವುತ್ತಾ ಊರಿನಲ್ಲಿ ಓಡಾಡುತ್ತಿದ್ದಾರೆ. ನಾವು ದೂರು ಕೊಟ್ಟಂತೆ ಪೊಲೀಸರು ಮಾಡಿಲ್ಲ. ಆರೋಪಿಗಳನ್ನು ಅರೆಸ್ಟ್ ಮಾಡದೇ ಕಾಲಹರಣ ಮಾಡುತ್ತಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ದೂರುಗಳ ಸುರಿಮಳೆಗೈಯ್ದರು.
ಸುಮಾರು 40 ನಿಮಿಷ ಸುರಿವ ಮಳೆಯನ್ನೂ ಲೆಕ್ಕಿಸದೇ ಸಂತ್ರಸ್ಥರು ತಮ್ಮ ಗ್ರಾಮದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಅತ್ಯಂತ ನೋವಿನಿಂದ ಹೇಳುತ್ತಿದ್ದರು. ಆ ಊರಿನಲ್ಲಿ ಯಾವ ಕಾನೂನು, ಸಂವಿಧಾನ ಇಲ್ಲ. ದೌರ್ಜನ್ಯ, ಅಟ್ಟಹಾಸ, ಶೋಷಣೆ ಅಷ್ಟೇ ಅಲ್ಲಿರುವುದು. ಊರವರ ಚಾಕರಿ ಮಾಡಿದರೆ ಮಾತ್ರ ಒಳ್ಳೆಯವರು. ಇಲ್ಲವಾದರೆ ಕೆಟ್ಟವರು. ನಮ್ಮನ್ನು ನಾಯಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುವವರ ಜೊತೆ ನಾವು ಬದುಕುವುದಾದರೂ ಹೇಗೆ? ಎಂಬಂತೆ ಪ್ರಶ್ನಿಸುತ್ತಿದ್ದರು.
ಕಳೆದ 25 ವರ್ಷಗಳಿಂದ ಆ ಗ್ರಾಮದಲ್ಲಿ ಗ್ರಾಮ ಪಂಚಾಯಿತಿಗೆ ಪರಿಶಿಷ್ಟ ಜಾತಿಗೆ ಸಿಗಬೇಕಾದ ಮೀಸಲು ಸ್ಥಾನವೇ ಲಭ್ಯವಾಗಿಲ್ಲ. ರೋಸ್ಟರ್ ಪಾಲನೆ ಆಗಿಲ್ಲ ಎಂದು ದೂರಿದರು. ಪ್ರತೀ ವರ್ಷವೂ ಸಾರಾಯಿ ಕಂಟ್ರಾಕ್ಟ್ ನಡೆಸುತ್ತಾರೆ. ಅಂದರೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಗ್ರಾಮಸ್ಥರೇ ಹರಾಜು ಕೂಗುತ್ತಾರೆ. ಒಬ್ಬರೇ ಮದ್ಯ ಮಾರಾಟ ಮಾಡಬೇಕು. ಈ ಬಾರಿ 9.53ಲಕ್ಷಕ್ಕೆ ಹರಾಜು ಕೂಗಲಾಗಿದೆ. ಇದು ಕಾನೂನು ಬಾಹಿರ ಎಂದು ಗೊತ್ತಿದ್ದರೂ ಪೋಲೀಸರು ಅಬಕಾರಿ ಅಧಿಕಾರಿಗಳು ಜಾಣ ಮೌನಕ್ಕೆ ಜಾರಿದ್ದಾರೆ ಎಂದು ದೂರಿದರು.
ನಂತರ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿಗಳಿಗೆ, ಆರೋಪಿಗಳನ್ನು ಬಂಧಿಸಬೇಕು. ಊರಿನಲ್ಲಿ ನಮಗೆ ಓಡಾಡಲು ಮುಕ್ತ ಅವಕಾಶ ಕಲ್ಪಿಸಬೇಕು. ಕನಿಷ್ಟ ಮೂಲ ಸೌಲಭ್ಯಗಳನ್ನು ಪಡೆಯಲು ಅವಕಾಶ ಇಲ್ಲದಂತಾಗಿದೆ ಎಂದು ಮನವಿ ಮಾಡಿದರು. ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿ, ಸಮಾಧಾನಪಡಿಸಿದ ನಂತರ ಧರಣಿ ವಾಪಾಸ್ ಪಡೆದರು.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ವಿಜಯಕುಮಾರ್, ಕುಮಾರ್, ಮಲ್ಲಿಕಾರ್ಜುನ್, ಸುರೇಶ್, ಹೊನ್ನೂರಸ್ವಾಮಿ, ಅನಂತ್, ಚಂದ್ರಪ್ಪ, ತಿಪ್ಪೇಸ್ವಾಮಿ, ಓಬಳೇಶ್, ಪ್ರಕಾಶ್ ಮತ್ತಿತರರು ಇದ್ದರು.