ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಬರಗಾಲ ಅಧಿಕವಾಗಿರುವುದರಿಂದ ಹೆಚ್ಚಿನ ಉದ್ಯೋಗ ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ದೇವಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಉದ್ಯೋಗ ಖಾತ್ರಿ ಕೂಲಿಕಾರರು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ನಗರದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಬರಪೀಡಿತವೆಂದು ಸರ್ಕಾರ ಘೋಷಿಸಿದೆ. ಕೇಂದ್ರ ಸರ್ಕಾರಕ್ಕೆ 18 ಸಾವಿರ ಕೋಟಿ ರು. ಗಳು ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ.
196 ತಾಲೂಕುಗಳಲ್ಲಿ ಬರದ ತೀವ್ರತೆ ಇದೆ. ಕುಡಿಯಲು ಶುದ್ಧ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಕೊರತೆಯಾಗುವ ಸಾಧ್ಯತೆ ಇದೆ. ಮಳೆಯ ಅಭಾವದಿಂದ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 10 ವರ್ಷಗಳಲ್ಲಿ ಕಂಡು ಕೆಳರಿಯದ ಬರ ಪರಿಸ್ಥಿತಿ ಉಂಟಾಗಿದೆ. ಕೂಲಿಕಾರರು ಹೊಟ್ಟೆಪಾಡಿಗಾಗಿ ವಲಸೆ ಹೋಗುವುದು ಹೆಚ್ಚಳವಾಗಿದೆ ಎಂದರು.ಬರಗಾಲ ನಿಮಿತ್ತ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ಮಾಡುವ ಕೆಲಸಗಾರರಿಗೆ ವರ್ಷದಲ್ಲಿ 100 ರಿಂದ 200 ಮಾನವ ದಿನಕ್ಕೆ ಹೆಚ್ಚಿಸಬೇಕು. ಬರಗಾಲದಲ್ಲಿ ಕೂಲಿಕಾರರ ಕನಿಷ್ಠ ದಿನಗೂಲಿ ಮಾಸಿಕ 600 ರು. ಗಳಿಗೆ ಏರಿಸಬೇಕು. ಅನುಕೂಲಸ್ಥ ರೈತರು ಕೂಲಿಕಾರರಿಗೆ ಕಾರ್ಮಿಕ ಇಲಾಖೆ ನಿಗದಿಪಡಿಸಿದ ಕನಿಷ್ಠ ವೇತನ ಸಂದಾಯ ಮಾಡಬೇಕು. ಕೂಲಿಕಾರರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದು ಮತ್ತು ಅವರ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಕೂಲಿಕಾರರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಬಲವಂತವಾಗಿ ವಸೂಲಿ ಮಾಡಬಾರದು ಮತ್ತು ಅವರ ಸಾಲವನ್ನು ಮನ್ನಾ ಮಾಡಬೇಕು. ಬರಗಾಲದಲ್ಲಿ ಶುದ್ಧ ಕುಡಿಯುವ ನೀರಿಗೆ ಹಾಗೂ ಜಾನುವಾರಗಳಿಗೆ ಮೇವಿನ ಕೊರತೆ ಆಗದಂತೆ ಕ್ರಮ ವಹಿಸಬೇಕು. ಬರಗಾಲದ ಸಮಯದಲ್ಲಿ ಯಂತ್ರಗಳ ಬಳಕೆ ನಿಲ್ಲಿಸಿ ಕೂಲಿಕಾರರಿಗೆ ಕೆಲಸದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.ಪ್ರಕಾಶ ಆಲ್ದಾಳ, ಬಸವರಾಜ (ಡಿಸಿ) ಮುಷ್ಠಳ್ಳಿ ಮಾತನಾಡಿದರು. ಶರಣಬಸವ ಜಂಬಲದಿನ್ನಿ, ಈಶಮ್ಮ ಬೆಳ್ಳಗಿ, ವೀರೇಶ ಕವಡಿಮಟ್ಟಿ, ಬಸವರಾಜ ಶಾಂತಸೂರ, ಖಾಜಾಸಾಬ ನಾಗರಾಳ, ಮದೀನಾ ತಳ್ಳಳ್ಳಿ, ಕನಕಮ್ಮ, ದೇವಿಕಮ್ಮ, ದುರಗಮ್ಮ, ದೇವಕ್ಕೆಮ್ಮ, ಮಲ್ಲೇಶ, ಗೌಡಪ್ಪಗೌಡ, ಯಲ್ಲಪ್ಪ, ಬಸವರಾಜ, ಈರಮ್ಮ, ಬಸವರಾಜ ಬಡಿಗೇರ, ದುರಗಮ್ಮ, ರಾಗಮ್ಮ ಕಟ್ಟಿಮನಿ, ಶರಣಪ್ಪ ಸೇರಿದಂತೆ ದೇವಾಪುರ, ಶೆಳ್ಳಗಿ, ಕವಡಿಮಟ್ಟಿ, ನಾಗರಾಳ, ಮುಷ್ಠಳ್ಳಿ, ಶಾಂತಪುರ, ಆಲ್ದಾಳ ಕೂಲಿ ಕಾರ್ಮಿಕರಿದ್ದರು.