ಕಳೆದ ಎರಡು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ನೂರಾರು ರಿಗ್ ಲಾರಿ ಮಾಲೀಕರು ಹಾಗೂ ಏಜೆಂಟರು ಭಾಗವಹಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್, ಜ.೧ರಿಂದ ಬೋರ್ವೆಲ್ ಕೊರೆಯುವ ಲಾರಿಗಳ ಬಿಟ್ ದರವನ್ನು ೨೬ ಸಾವಿರ ರು.ಗಳಿಂದ ಏಕಾಏಕಿ ೪೮ ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. ಈ ಅಸಹನೀಯ ಏರಿಕೆಯಿಂದ ರಿಗ್ ಲಾರಿ ಮಾಲೀಕರಿಗೆ ಭಾರೀ ಆಘಾತ ಉಂಟಾಗಿದೆ ಎಂದು ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಬೋರ್ವೆಲ್ ಕೊರೆಯುವ ಬಿಟ್ ದರವನ್ನು ಏಕಾಏಕಿ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿರುವುದನ್ನು ಖಂಡಿಸಿ ಹಾಸನ ಜಿಲ್ಲಾ ಬೋರ್ವೆಲ್ ರಿಗ್ ಮಾಲೀಕರು ಹಾಗೂ ಏಜೆಂಟರ ಸಂಘದ ವತಿಯಿಂದ ನಗರದ ಡೇರಿ ವೃತ್ತದ ಸಮೀಪದ ಎಸ್.ಎಂ.ಕೆ ನಗರ ಲೇಔಟ್ ಬಳಿ ಲಾರಿಗಳನ್ನು ನಿಲ್ಲಿಸಿ ತೀವ್ರ ಪ್ರತಿಭಟನೆ ನಡೆಸಲಾಯಿತು.ಕಳೆದ ಎರಡು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ನೂರಾರು ರಿಗ್ ಲಾರಿ ಮಾಲೀಕರು ಹಾಗೂ ಏಜೆಂಟರು ಭಾಗವಹಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಮಂಜುನಾಥ್, ಜ.೧ರಿಂದ ಬೋರ್ವೆಲ್ ಕೊರೆಯುವ ಲಾರಿಗಳ ಬಿಟ್ ದರವನ್ನು ೨೬ ಸಾವಿರ ರು.ಗಳಿಂದ ಏಕಾಏಕಿ ೪೮ ಸಾವಿರ ರು.ಗಳಿಗೆ ಹೆಚ್ಚಿಸಲಾಗಿದೆ. ಈ ಅಸಹನೀಯ ಏರಿಕೆಯಿಂದ ರಿಗ್ ಲಾರಿ ಮಾಲೀಕರಿಗೆ ಭಾರೀ ಆಘಾತ ಉಂಟಾಗಿದೆ ಎಂದು ಆರೋಪಿಸಿದರು.ಕಚ್ಚಾ ಸಾಮಗ್ರಿಗಳ ಬೆಲೆ ಏರಿಕೆಯ ನೆಪದಲ್ಲಿ ಬಿಟ್ ಕಂಪನಿಗಳು ಮನಬಂದಂತೆ ದರ ಹೆಚ್ಚಿಸಿರುವುದು ಅನ್ಯಾಯವಾಗಿದೆ ಎಂದರು. ಬಿಟ್ ದರ ಹಾಗೂ ಹ್ಯಾಮರ್ ಬೆಲೆ ಹೆಚ್ಚಳದಿಂದ ಬೋರ್ವೆಲ್ ಕೊರೆಯುವ ಒಟ್ಟು ವೆಚ್ಚವೂ ಅನಿವಾರ್ಯವಾಗಿ ಹೆಚ್ಚಳವಾಗಲಿದೆ. ಇದರ ನೇರ ಪರಿಣಾಮ ರೈತರ ಮೇಲೆ ಬೀಳಲಿದ್ದು, ಕೃಷಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಎಚ್ಚರಿಸಿದರು. ಸರ್ಕಾರ ಈ ವಿಚಾರದಲ್ಲಿ ತಕ್ಷಣ ಮಧ್ಯಪ್ರವೇಶ ಮಾಡಿ ಬಿಟ್ ದರವನ್ನು ನಿಯಂತ್ರಿಸಿದರೆ ರಿಗ್ ಮಾಲೀಕರಿಗೂ, ರೈತರಿಗೂ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.ಸಂಘದ ಖಜಾಂಚಿ ಶಿವಣ್ಣ ಮಾತನಾಡಿ, ಪ್ರತಿ ವರ್ಷ ಅಗತ್ಯ ವಸ್ತುಗಳ ಬೆಲೆ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗುವುದು ಸಹಜ. ಆದರೆ ಈ ಬಾರಿ ಬಿಟ್ ಮತ್ತು ಹ್ಯಾಮರ್‌ ದರಗಳು ಯಾರೂ ನಿರೀಕ್ಷಿಸದಷ್ಟು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದ ರಿಗ್ ಲಾರಿ ಮಾಲೀಕರಿಗೂ ಕಾರ್ಯನಿರ್ವಹಣೆ ಕಷ್ಟವಾಗುತ್ತಿದ್ದು, ಅಂತಿಮವಾಗಿ ರೈತರು ಹೆಚ್ಚಿನ ದರ ಭರಿಸುವ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಿದರು. ಇನ್ನೂ ಎರಡು ದಿನಗಳ ಕಾಲ ಪರಿಸ್ಥಿತಿಯನ್ನು ಗಮನಿಸಲಾಗುವುದು. ಈ ಅವಧಿಯಲ್ಲಿ ಬಿಟ್ ದರ ಕಡಿಮೆಯಾಗದಿದ್ದರೆ ಸಂಘದ ಪದಾಧಿಕಾರಿಗಳ ಸಭೆ ನಡೆಸಿ ಚರ್ಚೆಯ ಬಳಿಕ ಬೋರ್ವೆಲ್ ಕೊರೆಯುವ ಹೊಸ ಧರ ನಿಗದಿ ಮಾಡಲಾಗುವುದು ಎಂದು ಸಂಘ ಸ್ಪಷ್ಟಪಡಿಸಿದೆ. ಬೆಲೆ ಹೆಚ್ಚಳ ಮಾಡುವುದು ನಮ್ಮ ಉದ್ದೇಶವಲ್ಲ, ಆದರೆ ಬಿಟ್ ದರ ಏರಿಕೆಯ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ ರೈತರು ಸಹಕರಿಸಬೇಕು ಎಂದು ಸಂಘದವರು ಮನವಿ ಮಾಡಿದರು.ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಪುನೀತ್, ಉಪಾಧ್ಯಕ್ಷ ಉಮೇಶ್ ಸೇರಿದಂತೆ ಹಲವು ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.