7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ

| Published : Dec 13 2023, 01:00 AM IST

7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

7ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ ಅಂಚೆ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ

ಕಮಲೇಶಚಂದ್ರ ಸಮಿತಿ ಶಿಫಾರಸ್ಸು ಜಾರಿಗೊಳಿಸಬೇಕು । ಅಂಚೆ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಮಲೇಶಚಂದ್ರ ಸಮಿತಿ ಶಿಫಾರಸ್ಸಿನಂತೆ ಏಳನೇ ವೇತನ ಆಯೋಗವನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರು ನಗರದ ಕೇಂದ್ರ ಅಂಚೆ ಕಚೇರಿ ಮುಂಭಾಗದಲ್ಲಿ ಮಂಗಳವಾರ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವಿಭಾಗೀಯ ಅಧ್ಯಕ್ಷ ಟಿ.ಸಿ. ಚಂದ್ರಪ್ರಕಾಶ್, ಕರ್ತವ್ಯದಲ್ಲಿ ಎಂಟು ಗಂಟೆಗಳ ಕಾಲ ಕೆಲಸ, ಪಿಂಚಣಿ, 180 ದಿನಗಳವರೆಗೆ ರಜೆ ಉಳಿಸಿಕೊಳ್ಳಲು ಹಾಗೂ ಗ್ರೂಪ್ ಇನ್ಸೂರೆನ್ಸ್ ಕವರೇಜ್ ಅನ್ನು ಐದು ಲಕ್ಷಗಳ ವರೆಗೆ ಹೆಚ್ಚಿಸಿ ನೌಕರರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಏಳನೇ ವೇತನದ ಆಯೋಗ ಜಾರಿಗೊಳಿಸಿದ ಸಂದರ್ಭದಲ್ಲಿ ಗ್ರಾಮೀಣ ಅಂಚೆ ನೌಕರರಿಗೆ ಉತ್ತಮ ಸವಲತ್ತುಗಳನ್ನು ಒದಗಿಸುವ ಸಂಬಂಧ ಪ್ರತ್ಯೇಕವಾಗಿ ಕಮಲೇಶಚಂದ್ರ ಸಮಿತಿ ರಚಿಸಿ ಕೆಲವು ಶಿಫಾರಸ್ಸುಗಳನ್ನು ಮಾತ್ರ ಜಾರಿಗೊಳಿಸಿದೆ. ಉಳಿದ ಸವಲತ್ತುಗಳನ್ನು ಜಾರಿಗೊಳಿಸದೇ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.

ಪ್ರಸ್ತುತ ಗ್ರಾಮೀಣ ಅಂಚೆ ನೌಕರರು 4-5 ಗಂಟೆಗಳ ಕಾಲ ಕೆಲಸ ನಿರ್ವಹಿಸಲು ಸೀಮಿತವಿದ್ದರೂ ಕೂಡಾ 8-10 ಗಂಟೆಗಳ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೆಲ್ಲಾ ಕೆಲಸ ನಿಭಾಯಿಸಿದರೂ ದಿನಗೂಲಿ ನೌಕರರಾಗದೇ, ಇನ್ನೊಂದೆಡೆ ಇಲಾಖೆ ಸಿಬ್ಬಂದಿಗಳಾಗದೇ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿಕೊಂಡಂತಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಈ ಹಿಂದೆ ಸುಪ್ರೀಂ ಕೋರ್ಟ್ ಗ್ರಾಮೀಣ ಅಂಚೆ ನೌಕರರಿಗೆ ಸಿವಿಲ್ ನೌಕರರೆಂದು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ಸೂಚನೆ ನೀಡಿದ್ದರೂ ಸಹ ಕಣ್ಣಿಲ್ಲದ ಸರ್ಕಾರ ಹಾಗೂ ಅಧಿಕಾರಿಗಳು ಇವುಗಳನ್ನು ಪರಿಗಣಿಸದೇ ಅಸಡ್ಡೆ ತೋರುವ ಮೂಲಕ ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಜೀತದಾಳುಗಳನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

ಭಾರತದಲ್ಲಿ ಈಗಾಗಲೇ 3.50 ಲಕ್ಷ ಗ್ರಾಮೀಣ ಅಂಚೆ ನೌಕರರು ಕಡಿಮೆ ವೇತನದಲ್ಲಿ ಸಂಕಷ್ಟದಿಂದ ಜೀವನ ನಡೆಸುವಂತಾಗಿದ್ದು ನೌಕರರು ಆಕಸ್ಮಿಕ ಕಾಯಿಲೆಗಳಿಗೆ ತುತ್ತಾದರೆ ಸೂಕ್ತ ವೈದ್ಯಕೀಯ ಸೌಲಭ್ಯ ಇಲ್ಲವಾಗಿದೆ. ಈ ವೇತನದಿಂದ ಮಕ್ಕಳು ಹಾಗೂ ಕುಟುಂಬ ನಿರ್ವಹಣೆ ಕಷ್ಟಕರವಾಗಿದೆ ಎಂದು ಹೇಳಿದರು.

ಅಂಚೆ ಇಲಾಖೆಯಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ನೌಕರರಿಗೂ ಹಾಗೂ ಹೊಸದಾಗಿ ಸೇರ್ಪಡೆಗೊಳ್ಳುವ ನೌಕರರಿಗೆ ಏಕಸಮಾನ ವೇತನ ನಿಗಧಿಪಡಿಸಿರುವುದು ಸೂಕ್ತವಲ್ಲ. ಸೇವಾ ಹಿರಿತನದ ಆಧಾರದ ಮೇಲೆ ಕಮಲೇಶಚಂದ್ರ ಆಯೋಗದಂತೆ 12, 24 ಮತ್ತು 36 ವರ್ಷಗಳ ಸೇವೆ ಸಲ್ಲಿಸಿದವರಿಗೆ ಇಂಕ್ರಿಮೆಂಟ್ ನೀಡಲು ಸರ್ಕಾರಗಳು ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆ ಬಳಿಕ ಎಪಿಎಂಸಿ ಸಮೀಪವಿರುವ ಮುಖ್ಯ ಅಂಚೆಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಅಧೀಕ್ಷಕ ರಮೇಶ್ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಸಂಘದ ವಿಭಾಗೀಯ ಕಾರ್ಯದರ್ಶಿ ಟಿ.ಹನುಮಂತಪ್ಪ, ಖಜಾಂಚಿ ಎ.ಓ.ಭರತ್, ಕಾರ್ಯಕಾರಿ ಸಮಿತಿಯ ಗಂಗಾಧರ್, ಸುರೇಶ್, ಶಿವಣ್ಣ, ಹರ್ಷ, ಲಿಂಗಮೂರ್ತಿ, ನಿಶಾಂತ್, ನೌಕರರಾದ ಶೇಖರಪ್ಪ, ಪಾರ್ವತಮ್ಮ, ರಫೀಕ್, ಲಾವಣ್ಯ, ಕವಿತ, ರಶ್ಮಿ, ರಮಮಣಿ, ಬಿಂದು, ಕಮಲಮ್ಮ, ಪ್ರಕಾಶ್, ಶಿವಶಂಕರ್, ರವಿ, ಶೇಷಣ್ಣಗೌಡ ಪಾಲ್ಗೊಂಡಿದ್ದರು.12 ಕೆಸಿಕೆಎಂ 1

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಚಿಕ್ಕಮಗಳೂರಿನ ಅಂಚೆ ಕಚೇರಿ ಎದುರು ಗ್ರಾಮೀಣ ಅಂಚೆ ನೌಕರರು ಮಂಗಳವಾರ ಧರಣಿ ನಡೆಸಿದರು.