ಹೊಸ ರೈಲು ಪ್ರಾರಂಭಕ್ಕೆ ಆಗ್ರಹಿಸಿ ಡಿ.28ರಂದು ಪ್ರತಿಭಟನೆ

| Published : Dec 25 2023, 01:31 AM IST / Updated: Dec 25 2023, 01:32 AM IST

ಹೊಸ ರೈಲು ಪ್ರಾರಂಭಕ್ಕೆ ಆಗ್ರಹಿಸಿ ಡಿ.28ರಂದು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಜನಪ್ರತಿನಿಧಿಗಳು ಜನರಿಗೆ ರೈಲು ಸೌಲಭ್ಯಗಳನ್ನು ಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಲಬುರ್ಗಿ ಮತ್ತು ವಾಡಿ ರೈಲು ನಿಲ್ದಾಣಗಳಿಂದ ಕೋಟ್ಯಂತರ ರು.ಗಳ ಲಾಭವಾಗುತ್ತಿದ್ದರೂ ರೈಲ್ವೆ ಇಲಾಖೆ ಜಿಲ್ಲೆಯ ಜನರ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಗೆ ರೈಲಿನಲ್ಲಿ ಪ್ರಯಾಣಿಕರು ಹೋಗಲು ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಪ್ರಯಾಣಿಕರ ದಟ್ಟಣೆಯ ಸಂಚಾರವನ್ನು ನಿಯಂತ್ರಿಸಲು ಕಲಬುರ್ಗಿ- ಬೆಂಗಳೂರು ಇಂಟರ್‌ಸಿಟಿ ಎಕ್ಸ್‍ಪ್ರೆಸ್ ರೈಲನ್ನು ಪ್ರಾರಂಭ ಸೇರಿದಂತೆ ರೈಲ್ವೆ ಖಾಸಗೀಕರಣ ವಿರೋಧಿಸಿ ಡಿ.28ರಂದು ಸಂಜೆ ಐದು ಗಂಟೆಗೆ ನಗರದ ರೈಲು ನಿಲ್ದಾಣದ ಮುಂದೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷವು ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ. ದಿವಾಕರ್ ಅವರು ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನಪ್ರತಿನಿಧಿಗಳು ಜನರಿಗೆ ರೈಲು ಸೌಲಭ್ಯಗಳನ್ನು ಕೊಡಿಸುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಕಲಬುರ್ಗಿ ಮತ್ತು ವಾಡಿ ರೈಲು ನಿಲ್ದಾಣಗಳಿಂದ ಕೋಟ್ಯಂತರ ರು.ಗಳ ಲಾಭವಾಗುತ್ತಿದ್ದರೂ ರೈಲ್ವೆ ಇಲಾಖೆ ಜಿಲ್ಲೆಯ ಜನರ ಬೇಡಿಕೆಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿದರು.

ಕಲಬುರ್ಗಿಯಿಂದ ಬೆಂಗಳೂರಿಗೆ ರೈಲಿನಲ್ಲಿ ದಟ್ಟಣೆಯ ಪ್ರಯಾಣಿಕರು ಸಂಚರಿಸುತ್ತಿದ್ದಾರೆ. ಬೆಂಗಳೂರಿಗೆ ಹೊಸ ರೈಲುಗಳನ್ನು ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ಹಲವಾರು ಬಾರಿ ಹೋರಾಟಗಳನ್ನು ಮಾಡಿದರೂ ಸಹ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ತಕ್ಷಣವೇ ಕಲಬುರ್ಗಿ- ಬೆಂಗಳೂರು ಹೊಸ ಇಂಟರ್‌ಸಿಟಿ ವೇಗಧೂತ ರೈಲು ಪ್ರಾರಂಭಿಸಿದರೆ ಸಮಸ್ಯೆ ನೂರಕ್ಕೆ ನೂರರಷ್ಟು ಪರಿಹಾರವಾಗದಿದ್ದರೂ ಶೇ.50ರಷ್ಟು ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿರುವ ಎಲ್ಲ ರೈಲು ನಿಲ್ದಾಣಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ, ಉದ್ಯಾನ್ ಎಕ್ಸ್‌ಪ್ರೆಸ್ ಹಾಗೂ ಇನ್ನಿತರ ಎಕ್ಸ್‌ಪ್ರೆಸ್, ಬಾಗಲಕೋಟ್- ಯಶವಂತಪುರ ಸಾಮಾನ್ಯ ಬೋಗಿಗಳನ್ನು ಹೆಚ್ಚಿಸುವಂತೆ, ವಾರಕ್ಕೆ ಒಂದು ದಿನ ಬೀದರ್‍ನಿಂದ ಕಲಬುರ್ಗಿ ಮಾರ್ಗವಾಗಿ ಯಶವಂತಪೂರಕ್ಕೆ ಹೊರಡುವ ರೈಲನ್ನು ಪ್ರತಿ ದಿನ ಓಡಿಸುವಂತೆ, ರೈಲ್ವೆ ಖಾಸಗೀಕರಣ ನಿಲ್ಲಿಸುವಂತೆ ಅವರು ಆಗ್ರಹಿಸಿದರು.