ಹಾವೇರಿ: ರಸಗೊಬ್ಬರಕ್ಕಾಗಿ ಹಾವೇರಿಯಲ್ಲಿ ನಡೆದ ಗೋಲಿಬಾರ್ ಘಟನೆ ಖಂಡಿಸಿ ಜೂ. 10ರಂದು ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತ ಹುತಾತ್ಮ ದಿನಾಚರಣೆ ಬದಲಾಗಿ ರೈತರ ಹೋರಾಟ ದಿನ ಆಚರಿಸಲಾಗುವುದು. ಅಂದು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲ. ನೂರಕ್ಕೆ ನೂರರಷ್ಟು ರೈತರು ಭೂಮಿ, ನೀರು ನಂಬಿಕೊಂಡು ಒಕ್ಕಲುತನ ಮಾಡುತ್ತಿದ್ದು, ಇವರಿಗೆ ಭದ್ರತೆ ಇಲ್ಲದಾಗಿದೆ. ಅತಿವೃಷ್ಟಿ, ಅನಾವೃಷ್ಟಿಯಿಂದ ರೈತ ಕುಲ ತತ್ತರಿಸಿ ಹೋಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಆತ್ಮಹತ್ಯೆ ಮಾಡಿಕೊಂಡ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಜಿಲ್ಲೆಯಲ್ಲಿ ನಾಲ್ಕು ನದಿಗಳು ಇದ್ದರೂ ಸಮರ್ಪಕ ನೀರಾವರಿ ಸೌಲಭ್ಯ ಒದಗಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದೆ. ಬೀಜ, ಗೊಬ್ಬರ, ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆಯಿಂದ ರೈತರು ಕಂಗಾಲಾಗಿದ್ದಾರೆ. ಕೇಂದ್ರ ಸರ್ಕಾರ ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದ್ದ ಭರವಸೆ ಹುಸಿಯಾಗಿದೆ ಎಂದರು.ಮೆಕ್ಕೆಜೋಳಕ್ಕೆ 2,400 ರು. ಬೆಂಬಲ ಬೆಲೆ ನಿಗದಿ ಮಾಡಿದ್ದ ಕೇಂದ್ರ ಸರ್ಕಾರ ರೈತರಿಂದ ಮಾಲು ಖರೀದಿಸದೆ ಅನ್ಯಾಯ ಮಾಡಿದೆ. ಕೇವಲ 10 ರು. ಹೆಚ್ಚಿಸಿರುವುದರಿಂದ ರೈತರಿಗೆ ಯಾವುದೇ ಪ್ರಯೋಜನವಾಗಲಿಲ್ಲ. ರೈತರ ಮಕ್ಕಳೆಂದು ಹೇಳಿಕೊಳ್ಳುವ ಜಿಲ್ಲೆಯ ಶಾಸಕರು ರೈತರ ಕುಂದುಕೊರತೆ, ಸಮಸ್ಯೆಗಳನ್ನು ಆಲಿಸಿ, ಪರಿಹರಿಸುವ ಕೆಲಸ ಮಾಡಲಿಲ್ಲ. ಅವೈಜ್ಞಾನಿಕ ಬೆಳೆವಿಮೆ, ಅವೈಜ್ಞಾನಿಕ ಮಾರುಕಟ್ಟೆ, ಸಾಲನೀತಿ ದುಡಿಯುವ ರೈತನನ್ನು ಪಾತಾಳಕ್ಕೆ ತಳ್ಳಿದೆ. ಅಧಿಕಾರ ಹಂಚಿಕೆ ಕಿತ್ತಾಟದಲ್ಲಿ ರೈತರನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿದೆ. ಹೊಸ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ರೈತರ ಬಗ್ಗೆ ಕಾಳಜಿ ತೋರಿಸಿ, ರೈತರ ಸಮಸ್ಯೆ ಅರಿತು, ಪರಿಹರಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.2008ರಲ್ಲಿ ರಸಗೊಬ್ಬರಕ್ಕಾಗಿ ನಡೆದ ಗೋಲಿಬಾರ್ ಕರಾಳ ಘಟನೆ ಖಂಡಿಸಿ, ಜೂ.10ರಂದು ರೈತ ಹೋರಾಟ ದಿನವನ್ನಾಗಿ ಆಚರಿಸುವ ಮೂಲಕ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಲಾಗುವುದು. ಸರ್ಕಾರಕ್ಕೆ ರೈತ ಸಂಘದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಗುವುದು. ಆದ್ದರಿಂದ ಜಿಲ್ಲೆಯಲ್ಲಿರುವ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, ಪೂರ್ವ ಮುಂಗಾರಿನಲ್ಲಿ ಬಿದ್ದ ಮಳೆಗೆ ರೈತರು ಬಿತ್ತನೆ ಮಾಡಿದ್ದಾರೆ. ಇದೀಗ ವಾರಗಟ್ಟಲೇ ಮಳೆ ಹೋಗಿದೆ. ರೈತರು ಬಿತ್ತಿದ ಬೀಜ ಮೊಳಕೆಯೊಡೆಯದೆ ಹಾಳಾಗಿ, ಮರುಬಿತ್ತನೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮರುಬಿತ್ತನೆ ಮಾಡಬೇಕೆಂದರೆ ಗೊಬ್ಬರ ದಾಸ್ತಾನು ಇಲ್ಲ. ಅಧಿಕಾರಿಗಳು ಬಫರ್ ಸ್ಟಾಕ್ ಇದೆ ಎಂದು ಹೇಳುತ್ತಾರೆ, ಆದರೆ ಎಲ್ಲಿಯೂ ಗೊಬ್ಬರ ಸಿಗುತ್ತಿಲ್ಲ. ಹತ್ತಿ ಬೀಜಕ್ಕೆ 930 ರು. ದರ ನಿಗದಿ ಮಾಡಿದಂತೆಯೇ ಮೆಕ್ಕೆಜೋಳ ಬೀಜಕ್ಕೂ ಏಕರೂಪದ ದರ ನಿಗದಿ ಮಾಡಬೇಕು. 1800-2800 ರು. ವರೆಗೆ ಕಂಪನಿಗಳು ಮಾರಾಟ ಮಾಡುತ್ತಿದ್ದು, ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು. ಜತೆಗೆ ಕಾರಣಾಂತರದಿಂದ ನಿಂತಿರುವ ಬೇಡ್ತಿ-ವರದಾ ನದಿ ಜೋಡಣಾ ಡಿಪಿಆರ್ ಕಾರ್ಯ ಮುಂದುವರೆಸಬೇಕು, ಟಾಟಾ ಕಂಪನಿಗೆ ಹೆಸ್ಕಾಂನ್ನು ಮಾರಾಟ ಮಾಡಿ ಖಾಸಗೀಕರಣಗೊಳಿಸುತ್ತಿರುವ ಪ್ರಕ್ರಿಯೆ ರದ್ದಾಗಬೇಕು. ಸವಣೂರು ತಾಲೂಕಿಗೆ ಬರಬೇಕಾದ 60-80 ಕೋಟಿ ರು. ಬೆಳೆ ವಿಮೆ ಹಣ ಬರಬೇಕೆಂದು ಒತ್ತಾಯಿಸಿದರು.ರಾಜ್ಯ ಸಮಿತಿ ಸದಸ್ಯ ಮಾಲತೇಶ ಪೂಜಾರ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ ಅಭಾವ ಆಗಿದ್ದರೂ ಕೃಷಿ ಇಲಾಖೆ ಕಣ್ಮುಚ್ಚಿ ಕುಳಿತಿದೆ. ಎಫ್‌ಐಡಿ ಮೂಲಕ ಬೀಜ ಗೊಬ್ಬರ ವಿತರಿಸಿದರೆ, ಹೊಲ ಲಾವಣಿ ಮಾಡಿಕೊಂಡು ಕೃಷಿ ಕೈಗೊಳ್ಳುವ ರೈತರಿಗೆ ಅನ್ಯಾಯವಾಗುತ್ತಿದೆ. ಇಂತಹ ಅವೈಜ್ಞಾನಿಕ ಎಫ್‌ಐಡಿ ಪ್ರಕ್ರಿಯೆ ರದ್ದುಗೊಳಿಸಿ, ಮುಂಚೆ ವಿತರಿಸುತ್ತಿದ್ದ ಪ್ರಕ್ರಿಯೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಎಚ್.ಎಚ್ ಮುಲ್ಲಾ, ಶಿವಬಸಪ್ಪ ಗೋವಿ, ರುದ್ರಗೌಡ ಕಾಡನಗೌಡ್ರ, ಮರಿಗೌಡ ಪಾಟೀಲ, ಚನ್ನಪ್ಪ ಮರಡೂರ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ರಾಜು ತರ್ಲಘಟ್ಟ, ಸೋಮಣ್ಣ ಜಡೆಗೊಂಡ್ರ, ಗುಡ್ಡನಗೌಡ ಪ್ಯಾಟಿಗೌಡ್ರ, ಅಬ್ದುಲ್‌ಖಾದರ ಬುಡಂದಿ ಸೇರಿದಂತೆ ರೈತರು ಇದ್ದರು.ರೈತ ಹುತಾತ್ಮ ದಿನಾಚರಣೆ ಬದಲಾಗಿ ಜೂನ್ 10ರಂದು ಹೋರಾಟ
ರಸಗೊಬ್ಬರಕ್ಕಾಗಿ ಹಾವೇರಿಯಲ್ಲಿ ನಡೆದ ಗೋಲಿಬಾರ್ ಘಟನೆ ಖಂಡಿಸಿ ಜೂ. 10ರಂದು ಹಾವೇರಿಯ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರೈತ ಹುತಾತ್ಮ ದಿನಾಚರಣೆ ಬದಲಾಗಿ ರೈತರ ಹೋರಾಟ ದಿನ ಆಚರಿಸಲಾಗುವುದು. ಅಂದು ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ತಿಳಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.