ಕಳೆದ ಮೇನಲ್ಲಿ ಕಾರ್ಮಿಕ ಇಲಾಖೆ ಹೊರಡಿಸಿದ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು. ಹಿಂಬಾಕಿ ನೀಡಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ, ಇಎಸ್ಐ, ಭವಿಷ್ಯನಿಧಿ ನೀಡದೆ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸುವ ಏಜೆನ್ಸಿಗಳನ್ನು ಯಾವುದೇ ಮುಲಾಜ್ಲಿದೆ ಕಪ್ಪುಪಟ್ಟಿಗೆ ಸೇರಿಸಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ರಾಜ್ಯದ ವಿವಿಧ ಉದ್ದಿಮೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ವೇತನ ಪರಿಷ್ಕರಿಸಿ ರಾಜ್ಯ ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದ್ದರೂ ಜಾರಿಯಾಗುತ್ತಿಲ್ಲ. ಕನಿಷ್ಠ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ನ.೨೫ರಂದು ರಾಜ್ಯದ ವಿವಿಧ ಇಲಾಖೆಗಳ ಹೊರಗುತ್ತಿಗೆ ನೌಕರರು ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಎಂ.ಬಿ.ನಾಗಣ್ಣಗೌಡ ತಿಳಿಸಿದರು.ನ.೩೦ರಂದು ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರಗಳಲ್ಲಿ ಶಾಸಕರು, ಸಚಿವರಿಗೆ ಮನವಿ ಸಲ್ಲಿಸಿ ಮುಂದಿನ ಬೆಳಗಾವಿ ಅವೇಶನದಲ್ಲಿ ಕನಿಷ್ಠ ವೇತನ ಜಾರಿ ಕುರಿತು ಚರ್ಚಿಸುವಂತೆ ಆಗ್ರಹಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಮೇ ತಿಂಗಳಿನಲ್ಲಿ ಹೊರಗುತಿಗೆ ನೌಕರರ ಕನಿಷ್ಠ ವೇತನ ಪರಿಷ್ಕರಿಸಿ ರಾಜ್ಯ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿತು. ಈ ಅಧಿಸೂಚನೆ ಪ್ರಶ್ನಿಸಿ ಖಾಸಗಿ ಉದ್ದಿಮೆಗಳು ನ್ಯಾಯಾಲಯದ ಮೆಟ್ಟಿಲೇರಿ ಅಧಿಸೂಚನೆಗೆ ತಡೆಯಾಜ್ಞೆ ತರಲು ಯತ್ನಿಸಿವೆ. ಈ ಮಧ್ಯೆ ಸರ್ಕಾರ ತಾನೇ ಹೊರಡಿಸಿದ ಕನಿಷ್ಟ ವೇತನವನ್ನು ಜಾರಿಗೊಳಿಸುವ ಬದಲು ಅದನ್ನು ತಡೆಹಿಡಿಯಲು ಸುತ್ತೋಲೆ ಹೊರಡಿಸುವ ಮೂಲಕ ನೌಕರರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.ಕಳೆದ ಮೇನಲ್ಲಿ ಕಾರ್ಮಿಕ ಇಲಾಖೆ ಹೊರಡಿಸಿದ ಪರಿಷ್ಕೃತ ಕನಿಷ್ಠ ವೇತನ ಜಾರಿಗೊಳಿಸಬೇಕು. ಹಿಂಬಾಕಿ ನೀಡಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ, ಇಎಸ್ಐ, ಭವಿಷ್ಯನಿಧಿ ನೀಡದೆ ಕಾರ್ಮಿಕ ಕಾಯ್ದೆಗಳನ್ನು ಉಲ್ಲಂಘಿಸುವ ಏಜೆನ್ಸಿಗಳನ್ನು ಯಾವುದೇ ಮುಲಾಜ್ಲಿದೆ ಕಪ್ಪುಪಟ್ಟಿಗೆ ಸೇರಿಸಬೇಕು. ಹೊರಗುತ್ತಿಗೆ ಪದ್ದತಿ ರದ್ದುಪಡಿಸಿ ಪೌರಕಾರ್ಮಿಕರ ಮಾದರಿಯಲ್ಲಿ ಹೊರಗುತ್ತಿಗೆ ನೌಕರರನ್ನು ನೇರಪಾವತಿ ಯೋಜನೆಯಡಿ ತರಬೇಕು ಎಂದು ಆಗ್ರಹಿಸಿದರು.
ಹೊರಗುತ್ತಿಗೆ ನೌಕರರಾದ ಶ್ರುತಿ, ಸರೋಜಮ್ಮ, ವೆಂಕಟಲಕ್ಷ್ಮಿ, ಶಿವರಾಜು, ಶಿವರಾಂ ಗೋಷ್ಠಿಯಲ್ಲಿದ್ದರು.ಮಿಮ್ಸ್ ಅಧೀಕ್ಷಕರ ಹುದ್ದೆಗೆ ಪಿಡಬ್ಲ್ಯುಡಿ ವ್ಯವಸ್ಥಾಪಕ ನಿಯೋಜನೆ
ಮಿಮ್ಸ್ ಕಚೇರಿ ಅಧೀಕ್ಷಕರ ಹುದ್ದೆಗೆ ಲೋಕೋಪಯೋಗಿ ಇಲಾಖೆ ವ್ಯವಸ್ಥಾಪಕ ಮತ್ತು ಶಾಸಕರ ಆಪ್ತ ಸಹಾಯಕನನ್ನು ನಿಯಮಬಾಹೀರವಾಗಿ ನಿಯೋಜನೆ ಮಾಡಿರುವುದಾಗಿ ಎಂ.ಬಿ.ನಾಗಣ್ಣಗೌಡ ಆರೋಪಿಸಿದರು.ಸ್ವಾಯತ್ತ ಸಂಸ್ಥೆಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಮಾತೃ ಇಲಾಖೆಯಿಂದ ಬೇರೆ ಇಲಾಖೆಗೆ ನೌಕರರು ಮತ್ತು ಅಧಿಕಾರಿಗಳನ್ನು ನಿಯೋಜನೆ ಮಾಡುವುದು ಸರಿಯಾದ ಕ್ರಮವಲ್ಲ. ಮಿಮ್ಸ್ನಲ್ಲಿ ಕಚೇರಿ ಅಧೀಕ್ಷಕರೊಬ್ಬರು ನಿವೃತ್ತರಾಗಿ ಆ ಹುದ್ದೆ ಖಾಲಿ ಉಳಿದಿತ್ತು. ಇದಕ್ಕೆ ಲೋಕೋಪಯೋಗಿ ಕಚೇರಿ ವ್ಯವಸ್ಥಾಪಕ ಮತ್ತು ಶಾಸಕರ ಕಚೇರಿ ಸಹಾಯಕನನ್ನು ಮಿಮ್ಸ್ ಕಚೇರಿ ಅಧೀಕ್ಷಕರನ್ನಾಗಿ ನಿಯೋಜನೆ ಮಾಡುವ ಮೂಲಕ ಅಲ್ಲಿನ ಅರ್ಹ ನೌಕರರಿಗೆ ವಂಚನೆ ಮಾಡಿದಂತಾಗಿದೆ ಎಂದು ದೂಷಿಸಿದರು.
ಇಂತಹ ಕ್ರಮವನ್ನು ತಕ್ಷಣದಿಂದಲೇ ನಿಲ್ಲಿಸಿ ಆಯಾ ಇಲಾಖೆ ಅಥವಾ ಕಚೇರಿಯ ಸಿಬ್ಬಂದಿಗಳನ್ನೇ ಅಲ್ಲಿನ ಹುದ್ದೆಗಳಿಗೆ ನಿಯೋಜನೆ ಮಾಡುವ ಮೂಲಕ ಬಡ್ತಿ ನೀಡಬೇಕು. ಇಲ್ಲದಿದ್ದರೆ ನಿಯೋಜನೆಗೊಂಡ ಇಲಾಖೆಗಳ ಎಲ್ಲ ಕಚೇರಿಗಳ ಕೆಲಸ ಕಾರ್ಯಗಳು ವಿಳಂಬ ಇಲ್ಲವೇ ಸ್ಥಗಿತವಾಗುವ ಸಾಧ್ಯತೆಗಳಿವೆ ಎಂದರು.ಶಾಸಕರೊಬ್ಬರು ರಾತ್ರೋ ರಾತ್ರಿ ಜಿಲ್ಲಾಧಿಕಾರಿಗೆ ಶಿಫಾರಸ್ಸು ಪತ್ರ ನೀಡಿದರೆ ಅದರ ಬಗ್ಗೆ ಪರಿಶೀಲನೆ ಮಾಡದೆ ಕ್ಷಣಮಾತ್ರದಲ್ಲಿ ಅನುಮೋದನೆ ನೀಡಿರುವ ಜಿಲ್ಲಾಧಿಕಾರಿ ಕಾರ್ಯವನ್ನು ಪ್ರಶ್ನಿಸಿದರಲ್ಲದೆ, ಇಂತಹ ಅಧಿಕಾರಿಗಳಿಂದಲೇ ಜನಸಾಮಾನ್ಯರು ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿದೆ ಎಂದು ಕಿಡಿಕಾರಿದರು. ಇನ್ನಾದರೂ ಇಂತಹ ಆಟೋಟೋಪಗಳಿಗೆ ಕಡಿವಾಣ ಹಾಕಿ ನೈಜ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ಅವರಿಗೂ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.