ನೀರು ಬಿಡಲು ಕ್ರಮ ಕೈಗೊಳ್ಳದಿದ್ದರೆ ನ.4ರಂದು ಪ್ರತಿಭಟನೆ

| Published : Oct 21 2024, 12:33 AM IST

ಸಾರಾಂಶ

ಹನೂರು ತಾಲೂಕಿನ ಉಡುತೊರೆ ಜಲಾಶಯ ನೀರಾವರಿ ಯೋಜನೆ ರೈತರಿಗೆ ಸದ್ಬಳಕೆ ಮಾಡಿಕೊಳ್ಳಲು ನಾಲೆಗಳ ರಾಡಿ ಮತ್ತು ಗಿಡ ಗಂಟೆಗಳ ತೆರವುಗೊಳಿಸಿ ಕ್ರಮ ಕೈಗೊಳ್ಳದಿರುವ ಬಗ್ಗೆ ಪ್ರತಿಭಟನೆ ನಡೆಸಲು ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹನೂರು ಉಡುತೊರೆ ಹಳ್ಳ ಜಲಾಶಯದ ನೀರನ್ನು ರೈತರಿಗೆ ನೀಡಲು ಕಾಲುವೆಗಳಲ್ಲಿರುವ ರಾಡಿ ಕಸ ಕಡ್ಡಿಗಳನ್ನು ತೆರವುಗೊಳಿಸಿ ನೀರು ಬಿಡಲು ಕ್ರಮ ಕೈಗೊಳ್ಳದಿರುವುದನ್ನು ಖಂಡಿಸಿ ನ.4ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕದ ಅಧ್ಯಕ್ಷ ಅಮ್ಜಾದ್ ಖಾನ್ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಪದಾಧಿಕಾರಿಗಳ ಸಭೆ ಕರೆದು ರೈತರಿಗೆ ನೀರಾವರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಕ್ರಮ ಕೈಗೊಳ್ಳದಿರುವ ಬಗ್ಗೆ ಕರೆಯಲಾಗಿದ್ದ ಸಭೆಯಲ್ಲಿ ಚರ್ಚಿಸಿ ಅವರು ತೀರ್ಮಾನಿಸಿದರು. ತಾಲೂಕಿನ ಅಜ್ಜಿಪುರ ಸಮೀಪದಲ್ಲಿರುವ ಉಡುತೊರೆ ಜಲಾಶಯ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರಾವರಿ ಯೋಜನೆಯನ್ನು ರೂಪಿಸಲು ಕೋಟ್ಯಂತರ ರುಪಾಯಿ ವೆಚ್ಚ ಮಾಡಿ ಹಲವಾರು ವರ್ಷಗಳ ಹಿಂದೆಯೇ ನಿರ್ಮಾಣ ಮಾಡಿರುವ ಈ ಯೋಜನೆಯ ಜಲಾಶಯದ ನೀರು, ರೈತರಿಗೆ ಸದ್ಬಳಕೆ ಮಾಡಿಕೊಳ್ಳಲು ನೀರಾವರಿ ಯೋಜನೆಯನ್ನು ರೂಪಿಸಲು ಸಂಬಂಧಪಟ್ಟ ಜನ ಪ್ರತಿನಿಧಿ ಅಧಿಕಾರಿಗಳು ಕ್ರಮ ಕೈಗೊಳ್ಳತ್ತಿರುವ ಬಗ್ಗೆ ಈ ಸಭೆಯನ್ನು ಕರೆಯಲಾಗಿದೆ.

ಮುಂದಿನ ದಿನಗಳಲ್ಲಿ ಅಜ್ಜಿಪುರ ಗ್ರಾಮದ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದ್ದು ಈ ಬಗ್ಗೆ ಈ ಭಾಗದ ರೈತರ ಸಲಹೆ ಸೂಚನೆಗಳನ್ನು ಪಡೆದು ತಾಲೂಕಿನ ಮತ್ತು ಜಿಲ್ಲಾ ಮತ್ತು ರಾಜ್ಯ ಘಟಕದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅನುಮತಿ ಮೇರೆಗೆ ಅವರನ್ನು ಸಹ ಈ ಪ್ರತಿಭಟನೆಯಲ್ಲಿ ಭಾಗವಹಿಸಲು ಬರುವಂತೆ ಮನವರಿಕೆ ಮಾಡಿಕೊಟ್ಟು ನೀರಾವರಿ ಯೋಜನೆಗೆ ಅನುಕೂಲ ಕಲ್ಪಿಸದೆ ಇರುವ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕು ಎಂದರು.

ಪ್ರತಿಭಟನೆ ದಿನಾಂಕ ನಿಗದಿ:

ಈಗಾಗಲೇ ಇಲ್ಲಿನ ಜನಪ್ರತಿನಿಧಿ ಅಧಿಕಾರಿಗಳು ಉಡುತೊರೆ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಕಾಲುವೆಗಳಲ್ಲಿರುವ ರಾಡಿ ಮತ್ತು ಗಿಡ ಗಂಟೆಗಳನ್ನು ತೆರವುಗೊಳಿಸಿ, ಈ ಭಾಗದ ರೈತರಿಗೆ ನೀರಾವರಿ ಯೋಜನೆಯನ್ನು ಕಲ್ಪಿಸುವ ಸದುದ್ದೇಶದಿಂದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಆದರೆ, ಇದುವರೆಗೂ ನೀರಾವರಿ ಇಲಾಖೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇದರ ಬಗ್ಗೆ ಗಮನ ಹರಿಸದೆ ಇರುವುದರಿಂದ ತಾಲೂಕಿನ ಅಜ್ಜಿಪುರ ಗ್ರಾಮದಲ್ಲಿ ನ.4 ರಂದು ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಈ ಬಗ್ಗೆ ತಾಲೂಕಿನ ಎಲ್ಲಾ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಲು ಮನವಿ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಬಂದಿದ್ದ ರೈತ ಮುಖಂಡರು ಹಾಗೂ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.