ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ನವೆಂಬರ್‌ 7ರಂದು ಪ್ರತಿಭಟನೆ

| Published : Nov 04 2025, 02:45 AM IST

ಸಾರಾಂಶ

ಕಾಳು ಮಾಡುವ ಯಂತ್ರಗಳಿಗೆ ಚೆಸ್ಸಿ ನಂಬರ್ ಕೊಡುವುದು, ಹೋಬಳಿ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.7ರಂದು ಹಾವೇರಿ ಮುರುಘರಾಜೇಂದ್ರ ಮಠದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ರ್ಯಾಹಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಕರೆ ನೀಡಿದರು.

ಹಾವೇರಿ: ಕಾಳು ಮಾಡುವ ಯಂತ್ರಗಳಿಗೆ ಚೆಸ್ಸಿ ನಂಬರ್ ಕೊಡುವುದು, ಹೋಬಳಿ ಮಟ್ಟದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರ ಆರಂಭ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನ.7ರಂದು ಹಾವೇರಿ ಮುರುಘರಾಜೇಂದ್ರ ಮಠದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಬೃಹತ್ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಚಂದ್ರಶೇಖರ ಬಣ) ಜಿಲ್ಲಾಧ್ಯಕ್ಷ ಹನುಮಂತಪ್ಪ ಹುಚ್ಚಣ್ಣನವರ ಕರೆ ನೀಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಸೊಮವಾರ ನಡೆದ ಸಭೆಯಲ್ಲಿ ಮೆಕ್ಕೆಜೋಳ ಸೇರಿದಂತೆ ಕಾಳು ಮಾಡುವ ಎಲ್ಲ ಯಂತ್ರಗಳ ಸಮೇತ ಬೃಹತ್ ರ‍್ಯಾಲಿಯ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮೆಕ್ಕೆಜೋಳ, ಶೇಂಗಾ, ಸೋಯಾಬಿನ್ ಸೇರಿದಂತೆ ಇತರೆ ಬೆಳೆಗಳ ಕಾಳು ಮಾಡುವ ಯಂತ್ರಗಳಿಂದ ಜನರು ಬದುಕು ಕಟ್ಟಿಕೊಂಡಿದ್ದಾರೆ. ಕಾಳು ಬೇರ್ಪಡಿಸುವ ಯಂತ್ರದಲ್ಲಿ ಕೆಲವು ರೈತರು ಸಿಲುಕಿ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಕೈ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಅಂತಹವರ ಪರಿಸ್ಥಿತಿ ಶೋಚನೀಯವಾಗಿದೆ. ಹಾಗಾಗಿ ಕಾಳು ಮಾಡುವ ಯಂತ್ರಗಳ ಟ್ರಾಲಿ, ಚೆಸ್ಸಿಗಳಿಗೆ ಆರ್‌ಟಿಒ ಅಧಿಕಾರಿಗಳು ಚೆಸ್ಸಿ ನಂಬರ್ ಕೊಡಬೇಕು. ಈ ಸಂಖ್ಯೆಯಾಧರಿಸಿ ರೈತರು ಇನ್ಸೂರೆನ್ಸ್ ಮಾಡಿಸಿಕೊಳ್ಳುತ್ತಾರೆ. ಒಂದುವೇಳೆ ಅಪಘಾತ ಸಂಭವಿಸಿದರೆ ವಿಮೆ ಪರಿಹಾರವಾದರೂ ರೈತರ ಕೈಹಿಡಿಯುತ್ತದೆ. ಈ ಹಿನ್ನೆಲೆ ಪ್ರಮುಖ ಬೇಡಿಕೆಯೊಂದಿಗೆ ನ.7ರಂದು ಬೃಹತ್ ರ‍್ಯಾಲಿ ಹಮ್ಮಿಕೊಂಡಿದೆ. ರ‍್ಯಾಲಿಯಲ್ಲಿ 2ಸಾವಿರಕ್ಕೂ ಅಧಿಕ ರೈತರು, ಸುಮಾರು 300ಕ್ಕೂ ಅಧಿಕ ಟ್ರ್ಯಾಕ್ಟರ್, ಕಾಳು ಮಾಡುವ ಯಂತ್ರಗಳೊಂದಿಗೆ ರೈತರು ಭಾಗವಹಿಸಲಿದ್ದಾರೆ ಎಂದರು.ಇದರ ಜತೆಗೆ ಆರ್‌ಟಿಓ ಕಚೇರಿಗಳಲ್ಲಿ ರೈತರ ಕೃಷಿ ಸಂಬಂಧಿತ ವಾಹನಗಳಾದ ಟ್ರ್ಯಾಕ್ಟರ್, ಬೈಕ್, ಟಾಟಾಏಸ್, ಮಶೀನ್‌ನಂತಹ ಯಂತ್ರಗಳಿಗೆ ಸರ್ಕಾರದ ನಿಗದಿತ ಶುಲ್ಕ ಪಡೆದುಕೊಂಡು ಲೈಸೆನ್ಸ್ ಕೊಡಬೇಕು. ಕೇಂದ್ರ ಸರ್ಕಾರ ವಾಪಸ್ ಪಡೆದ ಮೂರು ಕೃಷಿ ಕಾಯಿದೆಗಳನ್ನು ರಾಜ್ಯ ಸರ್ಕಾರ ಇದುವರೆಗೂ ವಾಪಸ್ ಪಡೆದಿಲ್ಲ. ಹಾಗಾಗಿ ಸಿದ್ದರಾಮಯ್ಯ ಸರ್ಕಾರ ರೈತರಿಗೆ ಮಾರಕವಾದ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಲಾಗುವುದು ಎಂದರು.ಜಿಲ್ಲಾ ಕಾರ್ಯಾಧ್ಯಕ್ಷ ರುದ್ರಪ್ಪ ಬಳಿಗಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಟಿ.ಡಿ. ಮಾತನಾಡಿದರು. ರೈತ ಮುಖಂಡರಾದ ರಮೇಶ ದೊಡ್ಡೂರ, ಬಸಯ್ಯ ಹಿರೇಮಠ, ಮಂಜಣ್ಣ ಕಂಕಣವಾಡ, ಚನ್ನಬಸಪ್ಪ ಹಾವಣಗಿ, ಆನಂದ ಕೆಳಗಿನಮನಿ, ಶಿವನಗೌಡ ಗಾಜೀಗೌಡ್ರ, ಶ್ರೀನಿವಾಸ ಚಿಕ್ಕನಗೌಡ್ರ, ಗಿರಿಧರಗೌಡ ಪಾಟೀಲ, ಅನೀಲ ಡೊಳ್ಳಿನ, ಚಂದ್ರು ಬಂಕಾಪುರ, ನಾಗರಾಜ ರಿತ್ತಿಕುರುಬರ, ಮಾರ್ತಾಂಡಪ್ಪ ನೆಗಳೂರ, ರಾಮಣ್ಣ ಲಮಾಣಿ, ದೇವರಾಜ ದೊಡ್ಡಮನಿ ಸೇರಿದಂತೆ ಇತರರು ಇದ್ದರು.