ಸಾರಾಂಶ
ಇಡೀ ದೇಶಾದ್ಯಂತ ಏಕಕಾಲಕ್ಕೆ ಸುಮಾರು 500ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ನ.26 ರಂದು ದೊಡ್ಡ ಪ್ರಮಾಣದ ಹೋರಾಟ ಮಾಡಲಾಗುವುದು.
ರೈತ ವಿರೋಧಿ ನೀತಿ ಖಂಡಿಸಿ ಪ್ರಚಾರಾಂದೋಲನ
ಕನ್ನಡಪ್ರಭ ವಾರ್ತೆ ಕುಷ್ಟಗಿಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿ ಖಂಡಿಸಿ ಹಾಗೂ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರಚಾರಾಂದೋಲನದ ಅಂಗವಾಗಿ ಪಟ್ಟಣದಲ್ಲಿ ಹಮ್ಮಿಕೊಂಡ ಜಾಥಾಕ್ಕೆ ರಾಜ್ಯ ರೈತ ಸಂಘ ಹಾಗೂ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ ನಜೀರಸಾಬ ಮೂಲಿಮನಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸತತ 14 ತಿಂಗಳಗಳ ಕಾಲ ನಡೆದ ರೈತ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರವೂ ಮೂರು ಕರಾಳ ಕೃಷಿ ಕಾಯ್ದೆಯನ್ನು ಹಿಂಪಡೆದಿತ್ತು. ಅದೇ ರೀತಿಯಾಗಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಯೋಜನೆಯನ್ನು ಕಾನೂನಿನ ಚೌಕಟ್ಟಿನಲ್ಲಿ ತರುವುದಾಗಿ ಲಿಖಿತ ಹೇಳಿಕೆ ನೀಡಿದ ಹಿನ್ನೆಲೆ ರೈತರು ಹೋರಾಟವನ್ನು ಹಿಂಪಡೆದಿದ್ದರು. ಆದರೆ ನಾಲ್ಕು ವರ್ಷಗಳು ಕಳೆದರೂ ಕೂಡ ಯಾವುದೇ ರೀತಿಯ ಕಾನೂನನ್ನು ಮಾಡದೇ ಇರುವುದರಿಂದ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದರು.ಕಾಂಗ್ರೆಸ ಅಧಿಕಾರಕ್ಕೆ ಬಂದರೆ ಜಾರಿಯಲ್ಲಿರುವ ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಹೇಳಿಕೆ ನೀಡಿತ್ತು ಸರ್ಕಾರ ಬಂದು 2 ವರ್ಷಗಳು ಕಳೆದರೂ ಕಾಯ್ದೆಗಳನ್ನು ಹಿಂಪಡೆಯದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ ಎಂದರು.
ಆದ್ದರಿಂದ ಇಡೀ ದೇಶಾದ್ಯಂತ ಏಕಕಾಲಕ್ಕೆ ಸುಮಾರು 500ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರದ ನೀತಿಯ ವಿರುದ್ಧ ನ.26 ರಂದು ದೊಡ್ಡ ಪ್ರಮಾಣದ ಹೋರಾಟ ಮಾಡಲಾಗುವುದು. ಕೊಪ್ಪಳದಲ್ಲಿ ಕೂಡ ಹೋರಾಟ ನಡೆಯಲಿದ್ದು, ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.ಈ ಸಂದರ್ಭ ಪ್ರಮುಖರಾದ ಡಿ.ಎಚ್. ಪೂಜಾರ್, ಆರ್.ಕೆ. ದೇಸಾಯಿ, ಬಸವರಾಜ್ ಶೀಲವಂತರ, ಸುಕರಾಜ ತಾಳಿಕೇರಿ ಮಾತನಾಡಿದರು. ವೆಂಕಟೇಶ ಕುಲಕರ್ಣಿ, ಕೇಶವರಾವ, ರವಿ ಸಜ್ಜಲಗುಡ್ಡ, ಹನುಮಪ್ಪ ಸಜ್ಜಲಗುಡ್ಡ, ಅಕ್ಕಮ್ಮ ತಳವಗೇರ ಉಪಸ್ಥಿತರಿದ್ದರು.