ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನಾಲಾ ನಿರ್ವಹಣೆ ಕೊರತೆಯಿಂದ ಏರಿ ಮೇಲೆ ನೀರು ಉಕ್ಕಿ ಹರಿದು ಪೋಲಾಗುತ್ತಿದ್ದರೂ ನೀರಾವರಿ ಇಲಾಖೆ ಇಂಜಿನಿಯರುಗಳು ಯಾವುದೇ ಕ್ರಮ ವಹಿಸದ ಹಿನ್ನೆಲೆಯಲ್ಲಿ ಪಟ್ಟಣದ ಹೊರವಲಯದ ಸಾದುಗೋನಹಳ್ಳಿ ರೈತರು ಪ್ರತಿಭಟನೆ ನಡೆಸಿದರು.ಪಟ್ಟಣದ ಹೊರವಲಯದ ಸಾಧುಗೋನಹಳ್ಳಿ ಬಳಿ ಹೇಮಾವತಿ ಜಲಾಶಯದ 52ನೇ ವಿತರಣಾ ನಾಲೆ ಹಾದುಹೋಗಿದ್ದು, ವಿತರಣಾ ನಾಲೆಯಿಂದ ರೈತರ ಜಮೀನಿಗಳಿಗೆ ನೀರು ಹರಿಸುವ ಸೀಳು ನಾಲೆಯಲ್ಲಿ ನೀರಾವರಿ ಇಲಾಖೆ ನಿರ್ವಹಣಾ ಕೊರತೆಯಿಂದ ನೀರು ಸರಾಗವಾಗಿ ಹರಿಯದೆ ನಾಲೆ ಏರಿಯಿಂದ ಹರಿದು ರಸ್ತೆಗಳಲ್ಲಿ ಜನ ಸಂಚಾರಕ್ಕೆ ತೊಂದರೆಯಾಗಿದೆ. ರೈತರು ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಬಳಕೆಯಾಗಬೇಕಾದ ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಲುವೆಯಲ್ಲಿ ನೀರು ಹರಿಸಿದಾಗಲೆಲ್ಲಾ ಜನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಈ ಬಗ್ಗೆ ನೀರಾವರಿ ಇಲಾಖೆಗೆ ದೂರು ನೀಡಿದ್ದರೂ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ ಎಂದು ಆರೋಪಿಸಿ ಅಧಿಕಾರಿಗಳ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.ಪ್ರಸಕ್ತ ವರ್ಷ ಗೊರೂರಿನ ಹೇಮಾವತಿ ಜಲಾಶಯದಲ್ಲಿ ನೀರಿಕ್ಷಿತ ಪ್ರಮಾಣದ ನೀರು ಸಂಗ್ರಹವಾಗಿ ಕಾಲುವೆಗಳಿಗೆ ಹರಿಸಲಾಗಿದೆ. ನೀರು ಬಿಡುವುದಕ್ಕೂ ಮುಂಚೆ ಕಾಲುವೆ ಸ್ಥಿತಿಗತಿ ಪರಿಶೀಲಿಸಿಲ್ಲ. ಗುತ್ತಿಗೆದಾರರಿಗೆ ಕೆಲಸಗಳನ್ನು ಮಾಡಿಕೊಡಲು ಉತ್ಸುಕತೆ ತೋರಿಸುವ ಇಂಜಿನಿಯರುಗಳು ರೈತರ ಸಮಸ್ಯೆಗಳನ್ನು ಆಲಿಸಲು ಮುಂದಾಗುತ್ತಿಲ್ಲ ಎಂದು ದೂರಿದರು.ಯಾವಾಗ ಹೋದರೂ ಎಂಜಿನಿಯರುಗಳು ಕಚೇರಿಯಲ್ಲಿ ಸಿಕ್ಕುವುದಿಲ್ಲ. ವಿತರಣಾ ನಾಲೆಗಳಲ್ಲಿ ಗಿಡಗೆಂಟೆಗಳು ಬೆಳೆದು ಮುಂದಿನ ಭಾಗಕ್ಕೆ ನೀರು ಸರಾಗವಾಗಿ ಹರಿಯುತ್ತಿಲ್ಲ. ನದಿ ಅಣೆಕಟ್ಟೆ ನಾಲೆಗಳಾದ ಹೇಮಗಿರಿ, ಮಂದಗೆರೆ ನಾಲೆಗಳ ಏರಿಗಳ ಮೇಲೂ ಗಿಡಗೆಂಟೆಗಳು ಬೆಳೆದು ನಿಂತಿವೆ. ಅಧಿಕಾರಿಗಳು ಕಾಲಕಾಲಕ್ಕೆ ತನ್ನ ಸವಡೆಗಳನ್ನು ಬಿಟ್ಟು ಜಂಗಲ್ ಕಟ್ಟಿಂಗ್ ಮಾಡಿಸುತ್ತಿಲ್ಲ ಎಂದು ಕಿಡಿಕಾರಿದರು.
ಆಯಾಕಟ್ಟಿನ ಇಲಾಖೆಗಳಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ಹಾಕಿಸಿಕೊಂಡು ಬರಲು ತೋರಿಸುವ ಉತ್ಸಾಹವನ್ನು ಕಾಂಗ್ರೆಸ್ ಮುಖಂಡರು ಜನಪರ ಕೆಲಸ ಮಾಡಿಸಲು ತೋರಿಸುತ್ತಿಲ್ಲ. ಕ್ಷೇತ್ರದ ಶಾಸಕರು ಅಧಿಕಾರಿಗಳನ್ನು ನಿಯಂತ್ರಿಸಿ ಸಾರ್ವಜನಿಕರ ಕೆಲಸ ಮಾಡಿಸಲು ಪ್ರಯತ್ನಿಸಿದರೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.ರೈತರ ಸಮಸ್ಯೆಗಳು ಎಂದರೆ ಅಧಿಕಾರಿಗಳಿಗೆ ಒಂದು ರೀತಿಯಲ್ಲಿ ಅಸಡ್ಡೆ. ಕಚೇರಿಯಲ್ಲಿ ಅವರ ದರ್ಶನವಾಗುವುದಿಲ್ಲ. ಸೀಳು ನಾಲೆಯಲ್ಲಿ ನೀರುಬಿಟ್ಟಾಗಲೆಲ್ಲಾ ನೀರು ಉಕ್ಕಿ ಹರಿಯುತ್ತಿದೆ. ಹಲವು ಬಾರಿ ಪ್ರತಿಭಟಿಸಿದ್ದೇವೆ. ಆದರೂ ಕೂಡಾ ಸಮಸ್ಯೆ ಬಗೆಹರಿಯುತ್ತಿಲ್ಲ. ಶಾಸಕರು ಇದರ ಬಗೆಗೆ ಗಂಭೀರವಾಗಿ ಗಮನವನ್ನು ಹರಿಸಬೇಕು. ಇಲ್ಲದಿದ್ದರೆ ಹೇಮಾವತಿ ನೀರಾವರಿ ಇಲಾಖೆ ಕಚೇರಿ ಎದುರು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಸಾಧುಗೋನಹಳ್ಳಿ ಯುವ ರೈತ ಎಸ್.ಎಂ.ಲೋಕೇಶ್ ಎಚ್ಚರಿಸಿದರು.--------
9ಕೆಎಂಎನ್ ಡಿ16ಕೆ.ಆರ್.ಪೇಟೆ ತಾಲೂಕಿನ ಸಾದುಗೋನಹಳ್ಳಿ ಬಳಿ ಸೀಳುಗಾಲುವೆಯ ನೀರು ರಸ್ತೆ ಮೇಲೆ ಉರುಳಿರುವುದನ್ನು ಖಂಡಿಸಿ ರೈತರು ಪ್ರತಿಭಟಿಸಿದರು.