ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ವೈದ್ಯಕೀಯ ಕಾಲೇಜಿನ ಗುತ್ತಿಗೆ ನೌಕರರು 3 ತಿಂಗಳಿಂದ ಬಾಕಿ ಇರುವ ವೇತನವನ್ನು ಪಾವತಿಸುವಂತೆ ಹಾಗೂ ಸ್ವಯಂಘೋಷಿತ ಮೇಲ್ವಿಚಾರಕರ ಹೆಸರಿನಲ್ಲಿ ಕಾರ್ಮಿಕರಿಗೆ ಕಿರುಕುಳಕೊಡುವುದನ್ನು ನಿಲ್ಲಿಸಲು ಆಗ್ರಹಿಸಿ ಎಂಎಂಸಿ ಮತ್ತು ಆರ್ ಐ ಯುನೈಟೆಡ್ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ (ಎಐಯುಟಿಯುಸಿ ಸಂಯೋಜಿತ) ಸದಸ್ಯರು ಕಾಲೇಜಿನ ಆಡಳಿತ ಮಂಡಳಿಯ ಎದುರು ಸೋಮವಾರ ಪ್ರತಿಭಟಿಸಿದರು.

ಗುತ್ತಿಗೆ ನೌಕರರಿಗೆ ಇ-ಪಿಎಫ್ ಇಎಸ್‌ಐಗಳ ಸರಿಯಾದ ಪಾವತಿ ಮಾಡದೆ, ವೇತನ ಚೀಟಿ, ಸಮವಸ್ತ್ರ ನೀಡದೆ ಶೋಷಣೆ ಮಾಡಲಾಗುತ್ತಿದೆ. ಈ ಕುರಿತು ಸಮಸ್ಯೆ ಪರಿಹರಿಸಲು ಕ್ರಮ ಕೈಗೊಳ್ಳದಿರುವುದು ವಿಷಾದನೀಯ. ಈ ಕುರಿತು ಕಾನೂನು ಪ್ರಕಾರ 20 ದಿನಗಳ ಹಿಂದೆಯೇ ಮುಷ್ಕರದ ನೋಟಿಸ್ ನೀಡಿದ್ದರೂ ಆಡಳಿತ ಮಂಡಳಿ ಸಮಸ್ಯೆ ಪರಿಹರಿಸುವಲ್ಲಿ ಅಥವಾ ಕಾರ್ಮಿಕರ ಜೊತೆಗೆ ಚರ್ಚಿಸುವಲ್ಲಿ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಏಜೆನ್ಸಿಗಳ ವತಿಯಿಂದ ಡಿ ಗ್ರೂಪ್ ಹೆಸರಿನಲ್ಲೇ ಕೆಲಸ ಮಾಡುವ ಕೆಲವು ಸ್ವಯಂ ಘೋಷಿತ ಮೇಲ್ವಿಚಾರಕರ ಕಿರುಕುಳದಿಂದಾಗಿ ಕಾರ್ಮಿಕರು ಬೇಸತ್ತಿದ್ದಾರೆ. ಪ್ರತಿ ತಿಂಗಳು ಕನಿಷ್ಠ ವೇತನ ನೀಡುವಂತೆ ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ದರೂ ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಿಲ್ಲ. ಇದು ಆಡಳಿತ ಮಂಡಳಿಯ ತೀವ್ರ ನಿರ್ಲಕ್ಷ್ಯ ಮತ್ತು ಕಾರ್ಮಿಕರಿಗೆ ಮಾಡುತ್ತಿರುವ ಅಪರಾಧ. ಹೀಗಾಗಿ, ಕೂಡಲೇ ಬಾಕಿ ವೇತನ ಪಾವತಿ ಮಾಡಿ, ನೌಕರರು ಅನುಭವಿಸುತ್ತಿರುವ ಕಿರುಕುಳ ತಪ್ಪಿಸಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸಂಯುಕ್ತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಂ. ಉಮಾದೇವಿ, ಸಂಘದ ಅಧ್ಯಕ್ಷ ಚಂದ್ರಶೇಖರ್ ಮೇಟಿ, ಕಾರ್ಯದರ್ಶಿ ಎಸ್.ಎಚ್. ಹರೀಶ್, ಎಐಯುಟಿಯುಸಿ ಜಿಲ್ಲಾಧ್ಯಕ್ಷ ಯಶೋಧರ, ಜಿಲ್ಲಾ ಸಮಿತಿ ಸದಸ್ಯೆ ಪಿ.ಎಸ್. ಸಂಧ್ಯಾ, ರೈತ ಸಂಘಟನೆ ರಾಜ್ಯ ಉಪಾಧ್ಯಕ್ಷ ಎಚ್. ಶಿವಪ್ರಕಾಶ್ ಹಾಗೂ ಗುತ್ತಿಗೆ ಕಾರ್ಮಿಕರು ಇದ್ದರು.