ಸಾರಾಂಶ
ಕೆಮ್ಮಣ್ಣುನಾಲೆ ಮತ್ತು ಬೈರನ್ ನಾಲೆಗಳ ಮೂಲಕ ಹರಿದು ಬರುತ್ತಿರುವ ನೀರನ್ನು ಪಂಪ್ ಸೆಟ್‌ಗಳ ಮೂಲಕ ಅಕ್ರಮವಾಗಿ ಜಮೀನುಗಳಿಗೆ ನೀರು ಪೂರೈಕೆ ಮಾಡಿಕೊಳ್ಳುತ್ತಿರುವ ರೈತರ ಮೋಟಾರ್ ಪಂಪ್ ಸೆಟ್‌ಗಳನ್ನು ಪೊಲೀಸರ ಬೆಂಬಲದೊಂದಿಗೆ ಜಪ್ತಿ ಮಾಡುವಂತೆ ಶಾಸಕ ಕೆ.ಎಂ.ಉದಯ್ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತಾಕೀತು.
ಕನ್ನಡಪ್ರಭ ವಾರ್ತೆ ಮದ್ದೂರು
ತೆಂಗು ಮತ್ತು ಕಬ್ಬಿನ ಬೆಳೆಗೆ ಮದ್ದೂರು ಕೆರೆಯಿಂದ ಕೆಮ್ಮಣ್ಣುನಾಲೆ ಮತ್ತು ಬೈರನ್ ನಾಲೆ ಮೂಲಕ ನೀರು ಹರಿಸುವಂತೆ ಒತ್ತಾಯಿಸಿ ತಾಲೂಕಿನ ನಗರಕೆರೆ ಗ್ರಾಮಸ್ಥರು ಸೋಮವಾರ ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಗ್ರಾಮದ ಮುಖಂಡ ನ.ಲಿ.ಕೃಷ್ಣ ನೇತೃತ್ವದಲ್ಲಿ ನಿಗಮದ ಕಚೇರಿಗೆ ಆಗಮಿಸಿದ ರೈತರು ಧರಣಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಮದ್ದೂರು ಕೆರೆಯಿಂದ ಕೆಮ್ಮಣ್ಣುನಾಲೆ ಮತ್ತು ತೆಂಗು ಮತ್ತು ಕಬ್ಬಿನ ಬೆಳೆ ರಕ್ಷಣೆ ಮಾಡುವಂತೆ ಅಗ್ರಹಿಸಿದರು.
ಮದ್ದೂರು ಕೆರೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಾಗಿದೆ. ಇದರಿಂದ ದೀರ್ಘಾವಧಿ ಬೆಳೆಗಳಾದ ತೆಂಗು ಬೆಳೆ ರಕ್ಷಣೆ ಜೊತೆಗೆ ಕಬ್ಬಿನ ಬೆಳೆ ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಮುಖಂಡ ನ.ಲಿ.ಕೃಷ್ಣ ಹೇಳಿದರು.ಈಗಾಗಲೇ ತೆಂಗಿನ ಬೆಳೆಗೆ ಕಂಡು ಬಂದಿರುವ ಕಪ್ಪು ತಲೆ ಹುಳುವಿನ ಬಾಧೆಯಿಂದ ಸೊರಗಿ ಹೋಗುತ್ತಿವೆ. ಇವುಗಳ ರಕ್ಷಣೆಗಾಗಿ ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲೇ ಒಂದೊಂದು ಕಟ್ಟು ನೀರು ಹರಿಸುವುದು ಅನಿವಾರ್ಯವಾಗಿದೆ. ಹೀಗಾಗಿ ನಿಗಮದ ಅಧಿಕಾರಿಗಳು ಈ ತಕ್ಷಣ ನೀರು ಹರಿಸಲು ಕ್ರಮ ವಹಿಸಬೇಕು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕೆಮ್ಮಣ್ಣುನಾಲೆ ಅಚ್ಚುಕಟ್ಟು ರೈತ ರಾಧಾ ಎನ್ಎಲ್ ದೊಡ್ಡ್ ಶಿವಲಿಂಗೇಗೌಡ. ಸದಾನಂದ. ಧನಂಜಯ. ಚನ್ನಂಕೆ ಗೌಡ. ರಾಮು. ಶಿವಲಿಂಗಯ್ಯ. ರಾಮಕೃಷ್ಣ. ನಿಂಗಪ್ಪ. ಪ್ರಕಾಶ್ ಮತ್ತಿತರರು ಭಾಗವಹಿಸಿದ್ದರು.ರೈತರ ಮೋಟಾರ್ ಪಂಪ್ ಸೆಟ್ ಜಪ್ತಿ ಮಾಡುವಂತೆ ಶಾಸಕರ ತಾಕೀತುಕೆಮ್ಮಣ್ಣುನಾಲೆ ಮತ್ತು ಬೈರನ್ ನಾಲೆಗಳ ಮೂಲಕ ಹರಿದು ಬರುತ್ತಿರುವ ನೀರನ್ನು ಪಂಪ್ ಸೆಟ್ ಗಳ ಮೂಲಕ ಅಕ್ರಮವಾಗಿ ಜಮೀನುಗಳಿಗೆ ನೀರು ಪೂರೈಕೆ ಮಾಡಿಕೊಳ್ಳುತ್ತಿರುವ ರೈತರ ಮೋಟಾರ್ ಪಂಪ್ ಸೆಟ್‌ಗಳನ್ನು ಪೊಲೀಸರ ಬೆಂಬಲದೊಂದಿಗೆ ಜಪ್ತಿ ಮಾಡುವಂತೆ ಶಾಸಕ ಕೆ.ಎಂ.ಉದಯ್ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ತಾಕೀತು ಮಾಡಿದರು. ರೈತರಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಮದ್ದೂರು ಕೆರೆಯಿಂದ ಕೆಮ್ಮಣ್ಣುನಾಲೆ ಹಾಗೂ ಬೈರನ್ ನಾಲೆಗಳ ಮೂಲಕ ರೈತರ ಕೊನೆ ಭಾಗದ ಜಮೀನುಗಳಿಗೆ ನೀರು ಹರಿಸಲಾಗುತ್ತಿದೆ. ಆದರೆ, ಕೆಲವು ರೈತರು ನಾಲೆನೀರನ್ನು ಪಂಪ್ ಸೆಟ್ ಗಳ ಮೂಲಕ ತಮ್ಮ ಜಮೀನುಗಳಿಗೆ ಅಕ್ರಮವಾಗಿ ಪೂರೈಕೆ ಮಾಡಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದರು.ಬೇಸಿಗೆ ಹಿನ್ನೆಲೆಯಲ್ಲಿ ಮದ್ದೂರು ಕೆರೆಯಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ ಜನ ಜಾನುವಾರುಗಳಿಗೆ ಕುಡಿಯಲು ಅನುಕೂಲವಾಗುವಂತೆ ನೀರನ್ನು ದಾಸ್ತಾನು ಮಾಡಲಾಗಿದೆ. ಆದರೆ, ಮಾನವೀಯತೆ ದೃಷ್ಟಿಯಿಂದ ಬೆಳದು ನಿಂತ ಬೆಳೆಗಳಿಗೆ ಮಾತ್ರ ಗುರುವಾರದಿಂದ ತಾತ್ಕಾಲಿಕವಾಗಿ ಕೆರೆಯಿಂದ ನೀರು ಹರಿಸಲು ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಅಧಿಕಾರಿಗಳು ಈ ಕೂಡಲೇ ನಾಲೆಗಳ ಕೊನೆ ಭಾಗದ ಜಮೀನುಗಳಿಗೆ ನೀರು ತಲುಪುವಂತೆ ಎಚ್ಚರ ವಹಿಸಬೇಕು. ಒಂದು ವೇಳೆ ಪಂಪ್ ಸೆಟ್ ಗಳ ಮೂಲಕ ಅಕ್ರಮವಾಗಿ ಜಮೀನುಗಳಿಗೆ ನೀರು ಹರಿಸಿಕೊಳ್ಳುತ್ತಿರುವುದು ಗಮನಕ್ಕೆ ಬಂದರೆ ಪೊಲೀಸ್ ಬೆಂಬಲದೊಂದಿಗೆ ಪಂಪ್ ಸೆಟ್ ಗಳ ಜಪ್ತಿ ಮಾಡಿ ಕಾನೂನು ಕ್ರಮ ಜರುಗಿಸುವಂತೆ ಸ್ಥಳದಲ್ಲಿದ್ದ ಕಾವೇರಿ ನೀರಾವರಿ ನಿಗಮದ ಸಹಾಯಕ ಇಂಜಿನಿಯರ್ ನಾಯಕ್ ಅವರಿಗೆ ಸೂಚಿಸಿದರು.