ಸಾರಾಂಶ
ಸಂಪಳ್ಳಿ ವಾಸಿಗಳು 94/ಸಿ ಅಡಿಯಲ್ಲಿ ಮಂಡ್ಯ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದು ಜಿಲ್ಲಾಧಿಕಾರಿ ಮತ್ತು ಉಪ ವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಕ್ಕುಪತ್ರ ವಿತರಿಸುವಂತೆ ಸೂಚಿಸಿದ್ದರೂ ಸಹ ತಹಸೀಲ್ದಾರ್ ಇಲ್ಲಸಲ್ಲದ ಸಬೂಬು ಹೇಳುತ್ತಿರುವುದು ಸರಿಯಲ್ಲ. ಕುಳಿತು ಹಕ್ಕುಪತ್ರ ನೀಡಿ ಇಲ್ಲದಿದ್ದರ ಜೈಲಿಗೆ ಕಳುಹಿಸಿ ಎಂದು ಅನಿರ್ದಿಷ್ಟ ಧರಣಿ ಆರಂಭಿಸುತ್ತೇವೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮೂಲ ಸೌಲಭ್ಯ ಸೇರಿದಂತೆ ಸಂಪಳ್ಳಿಯ ಸರ್ವೇ ನಂ.129ರಲ್ಲಿ ವಾಸ ಮಾಡುತ್ತಿರುವವರಿಗೆ ಹಕ್ಕುಪತ್ರ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿ ನಿವಾಸಿಗಳು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಸರ್‌ಎಂವಿ ಪ್ರತಿಮೆ ಎದುರಿನಿಂದ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ಆಗಮಿಸಿ ಧರಣಿ ಕುಳಿತು ಹಕ್ಕುಪತ್ರ ನೀಡಿ ಇಲ್ಲದಿದ್ದರ ಜೈಲಿಗೆ ಕಳುಹಿಸಿ ಎಂದು ಅನಿರ್ದಿಷ್ಟ ಧರಣಿ ಆರಂಭಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಂಪಳ್ಳಿ ವಾಸಿಗಳು 94/ಸಿ ಅಡಿಯಲ್ಲಿ ತಾಲೂಕು ಆಡಳಿತಕ್ಕೆ ಅರ್ಜಿ ಸಲ್ಲಿಸಿದ್ದು ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಕ್ಕು ಪತ್ರ ವಿತರಿಸುವಂತೆ ಸೂಚಿಸಿದ್ದರೂ ಸಹ ತಹಸೀಲ್ದಾರ್ ಇಲ್ಲಸಲ್ಲದ ಸಬೂಬು ಹೇಳುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸಂಪಳ್ಳಿ ಸರ್ವೆ ನಂ.129 ರಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು. ಕುಡಿಯುವ ನೀರು, ವಿದ್ಯುತ್, ಶೌಚಾಲಯ, ರಸ್ತೆ, ಚರಂಡಿ, ಸ್ಮಶಾನ ಸೇರಿದಂತೆ ಇತರೆ ಮೂಲ ಸೌಕರ್ಯ ದೊರಕಿಸಿಕೊಡಬೇಕು. ಬರ ಪರಿಸ್ಥಿತಿಯಿಂದ ತಾಲೂಕಿನಲ್ಲಿ ಕುಡಿಯುವ ನೀರಿನ ಹಾಹಾಕಾರ ಎದುರಾಗಿದೆ. ತುರ್ತಾಗಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಕೂಲಿಕಾರರ ಕುಟುಂಬಗಳಿಗೆ ಉಚಿತ ವಿದ್ಯುತ್ ನೀಡಬೇಕು. ಹದಗೆಟ್ಟಿರುವ ರಸ್ತೆ ದುರಸ್ತಿಗೊಳಿಸಬೇಕು. ಬರಗಾಲದಲ್ಲಿ ಉದ್ಯೋಗ ನೀಡಿ ಜನರ ಬದುಕು ರಕ್ಷಿಸಬೇಕು. ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದು ರೈತರನ್ನು ಉಳಿಸುವ ಯೋಜನೆಯನ್ನು ತುರ್ತಾಗಿ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಂಘದ ಸಿ.ಕುಮಾರಿ, ಎಂ.ಪುಟ್ಟಮಾದು, ಡಿ.ಹನುಮೇಶ್, ಅಮಾಸಯ್ಯ, ಆರ್.ರಾಜು, ಎಂ.ಎಸ್.ಸಂತೋಷ, ಸಿ.ಕುಮಾರಿ, ರಾಜೇಶ್ವರಿ, ಮಂಜುಳಾ ಭಾಗವಹಿಸಿದ್ದರು.