ಮೀಸಲು ಹಂಚುವ ಬದಲು ಪ್ರತ್ಯೇಕವಾಗಿ ವಿಭಾಗಿಸುವ ಮುಖಾಂತರ ರಾಜ್ಯದಲ್ಲಿ ಅತಿಹೆಚ್ಚಿನ ಸಂಖ್ಯೆಯಿರುವ ನಮಗೆ ಘೋರ ಅನ್ಯಾಯ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಸ್ಟೀಸ್ ನಾಗಮೋಹನ್‌ದಾಸ್ ಏಕಸದಸ್ಯ ಸಮಿತಿ ನೀಡಿರುವ ಅವೈಜ್ಞಾನಿಕ ವರದಿ ತಿರಸ್ಕರಿಸಿ ನೇಮಕಾತಿಗಳಲ್ಲಿ ಬಲಗೈ ಸಮುದಾಯಕ್ಕೆ ಎದುರಾಗಿರುವ ರೋಸ್ಟರ್ ಬಿಂದು ಸಮಸ್ಯೆಯನ್ನು ಪರಿಹರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಮುಂದೆ ರಾಜ್ಯ ಬಲಗೈಜಾತಿಗಳ ಒಕ್ಕೂಟದಿಂದ ಮಂಗಳವಾರ ಬೃಹತ್ ಹೋರಾಟ ನಡೆಯಿತು.ನಗರದ ಅಂಬೇಡ್ಕರ್ ಭವನದಿಂದ ಜಿಲ್ಲಾಡಳಿತ ಭವನದವರೆಗೆ ಸುಮಾರು 3 ಕಿಮೀ ಗೂ ಹೆಚ್ಚು ದೂರ ಕಾಲ್ನಡಿಗೆ ಜಾಥಾ ಮಾಡುವ ಮೂಲಕ 2,000 ಸಂಖ್ಯೆಯಷ್ಟು ಬೃಹತ್ ಪ್ರಮಾಣದ ಬಲಗೈ ಸಮುದಾಯದ ಮುಖಂಡರು ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ನ್ಯಾ.ನಾಗಮೋಹನ್‌ದಾಸ್ ಅವರ ವರದಿ ಹೊಲೆಯ ಸಂಬಂದಿತ ಛಲವಾದಿ, ಚನ್ನದಾಸ, ದಾಸ, ಆದಿಕರ್ನಾಟಕ, ಆದಿ ದ್ರಾವಿಡ ಇತರೆ ಹೊಲೆಯ ಸಂಬಂಧಿತ ಜಾತಿಗಳನ್ನು ಒಟ್ಟುಗೂಡಿಸಿ ಜನಸಂಖ್ಯೆಯನ್ನು ನಮೂದಿಸಿ ಮೀಸಲು ಹಂಚುವ ಬದಲು ಪ್ರತ್ಯೇಕವಾಗಿ ವಿಭಾಗಿಸುವ ಮುಖಾಂತರ ರಾಜ್ಯದಲ್ಲಿ ಅತಿಹೆಚ್ಚಿನ ಸಂಖ್ಯೆಯಿರುವ ನಮಗೆ ಘೋರ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.ಹೊಲೆಯ ಸಮುದಾಯ ನಿಖರವಾಗಿ ಜಾತಿ ನಮೂದಿಸಿದ್ದರೂ, ನಮೂದಾಗಿಲ್ಲ ಎನ್ನುವಂತೆ ಅಸಂಬದ್ಧ ವರದಿಯನ್ನು ನೀಡಿ ಎಬಿಸಿ ಗುಂಪುಗಳಾಗಿ ವಿಭಾಗಿಸಿರುವ ಈ ವರದಿಯನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಅಂಗೀಕರಿಸದೆ ತಿರಸ್ಕರಿಸಬೇಕು. ಹೊಲೆಯ ಸಮುದಾಯಾದ ಎಲ್ಲಾ ಗುಂಪುಗಳನ್ನು ಒಟ್ಟುಗೂಡಿಸಿ ಎಬಿಸಿವಾರು ವರ್ಗೀಕರಿಸದೆ ಮತ್ತೊಮ್ಮೆ ವೈಜ್ಞಾನಿಕವಾಗಿ ನಿರ್ಧಿಷ್ಟ ವರದಿ ತಾಯಾರಿಸುವವರೆಗೆ ನ್ಯಾ.ನಾಗಮೋಹನ್‌ದಾಸ್ ವರದಿಯಂತೆ ಒಳಮೀಸಲಾತಿ ಜಾರಿ ಮಾಡಬಾರದು. 56 ಸಾವಿರ ಉದ್ಯೋಗಗಳನ್ನು ತುಂಬಬಾರದು ಎಂದು ಆಗ್ರಹಿಸಿದರು.

ಜಿಲ್ಲೆಯಲ್ಲಿ ಅಂಬೇಡ್ಕರ್ ಅವರ ಆಶಯದಂತೆ ಸರ್ಕಾರದಿಂದ ನಡೆಯುತ್ತಿರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ,ಮತ್ತು ಅಲ್ಪಸಂಖ್ಯಾತರ ಇಲಾಖೆಯ ವಸತಿ ಸಹಿತ ವಿದ್ಯಾರ್ಥಿ ನಿಲಯಗಳಲ್ಲಿ ನಡೆದಿರುವ ಅನ್ನದ ಹಗರಣದ ಬಗ್ಗೆ ಸರ್ಕಾರ ಕೂಡಲೇ ತನಿಖೆ ನಡೆಸಬೇಕು. ಮಕ್ಕಳಿಗೆ ಬರುವ ಅನ್ನದ ಹಣದಲ್ಲಿ ಗೋಲ್‌ಮಾಲ್ ಮಾಡಿರುವ ಅಧಿಕಾರಿಗಳು, ವಾರ್ಡನ್‌ಗಳು, ಆಹಾರ ಸರಬರಾಜು ಗುತ್ತಿಗೆದಾರರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಾಲು ಮೊಸರು ಮೊಟ್ಟೆ ಮೊಟ್ಟೆ ತರಕಾರಿ ಧವಸ ಧಾನ್ಯ ಬಾಳೆಹಣ್ಣುಗಳ ಪ್ರತಿ ಸರಬರಾಜಿನ ಸಂದರ್ಭದಲ್ಲಿ ತೆಗೆಸಿರುವ ಜಿಪಿಎಸ್ ಪೋಟೋಗಳನ್ನು ಪರಿಶೀಲಿಸಿ ಪೋಟೋಗಳಲ್ಲಿರುವ ವ್ಯಕ್ತಿಗಳನ್ನು ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಮೂಲಭೂತ ಸೌಕರ್ಯಗಳಡಿ ನಿಯಮ ಉಲ್ಲಂಘಿಸಿ ಕೊಟೇಷನ್ ಮತ್ತು ಕಟ್ ಬಿಲ್ಲುಗಳ ಮುಖಾಂತರ ನಡೆಸಿರುವ ಅಕ್ರಮವನ್ನು ೬೨ಬಿ ಪ್ರಕಾರ ಎಲ್ಲಾ ಸಾಧಿಲ್ವಾರು ಬಿಲ್ಲುಗಳನ್ನು ಹಿಂದಿನ ೨ ವರ್ಷಗಳ ತನಕ ತನಿಖೆಗೆ ಒಳಪಡಿಸಬೇಕು. ಪಾರದರ್ಶಕ ಟೆಂಡರ್ ಮೂಲಕ ಮೂಲಭೂತ ಸೌಕರ್ಯ ಒದಗಿಸಬೇಕು. ಟೆಂಡರ್ ಪಡೆದ ಮೂಲ ಗುತ್ತಿಗೆದಾರರಿಂದ ನೇರವಾಗಿ ಆಹಾರ ಸರಬರಾಜು ಮಾಡದೆ ತುಂಡು ಗುತ್ತಿಗೆ ನೀಡಿ ಮಕ್ಕಳ ಅನ್ನದ ಹಗರಣ ನಡೆಯಲು ಅವಕಾಶ ನೀಡಿರುವ ಕಾರಣ ಇವರ ಇಎಂಡಿ ಹಣವನ್ನು ಮುಟ್ಟುಗೋಲಿ ಹಾಕಿ ಕಪ್ಪುಪಟ್ಟಿಗೆ ಸೇರಿಸಬೇಕು. ಈ ಹಗರದಲ್ಲಿ ಭಾಗಿಯಾಗಿರುವ ೩ ಇಲಾಖೆಗಳ ಎಲ್ಲಾ ಅಧಿಕಾರಿಗಳ ಮೇಲೆ ಸೂಕ್ತ ತನಿಖೆ ನಡೆಯಬೇಕು. ಹತ್ತಾರು ವರ್ಷಗಳಿಂದ ಬೀಡುಬಿಟ್ಟಿರುವ ನೌಕರರನ್ನು ವರ್ಗಾವಣೆ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಒಕ್ಕೂಟ ಆಗ್ರಹಿಸಿತು.ಈ ವೇಳೆ ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಜಿಲ್ಲಾಧ್ಯಕ್ಷ ರಾಮಕೃಷ್ಣ, ಸಲಹಾ ಸಮಿತಿ ಸದಸ್ಯರಾದ ನಾರಾಯಣಪ್ಪ, ಖಜಾಂಚಿ ನರಸಿಂಹಮೂರ್ತಿ, ಕಾರ್ಯದರ್ಶಿ ಗಂಗಾಧರ್, ವೆಂಕಟಕೃಷ್ಣ, ಕಾರ್ಯದರ್ಶಿ, ಮಂಜುನಾಥ್, ವೈ. ಶಂಕರ್, ರಾಮಚಂದ್ರ, ಚಿನ್ನಪ್ಪ, ನಾಗರಾಜ್, ಗೌರೀಶ್, ಅಧ್ಯಕ್ಷ ಚಂದ್ರು, ತುಳಸಿ ಕೃಷ್ಣ, ತಾಲೂಕು ಸಲಹಾ ಸದಸ್ಯರಾದ ವೇಣು, ಶ್ರೀನಾಥ್, ಕೃಷ್ಣಪ್ಪ, ಸಿಪಿಎಂ ರಮೇಶ್, ಈಶ್ವರ್ ಅಂಜನ್ ವೆಂಕಟರೆಡ್ಡಿ ಆರ್,ಶ್ರೀರಾಮ್ ಇದ್ದರು.

ಸಿಕೆಬಿ-2 ಜಿಲ್ಲಾಡಳಿತ ಭವನದ ಎದುರು ನ್ಯಾ.ನಾಗಮೋಹನ್ ದಾಸ್ ಆಯೋಗದ ವರದಿ ತಿರಸ್ಕರಿಸುವಂತೆ ಬಲಗೈ ಜಾತಿಗಳ ಒಕ್ಕೂಟದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.