ಶ್ರೀಕಾಂತ್ ಪೂಜಾರಿ ಬಿಡುಗಡೆಗೆ ಆಗ್ರಹಿಸಿ, ಪ್ರತಿಭಟನೆ

| Published : Jan 06 2024, 02:00 AM IST

ಶ್ರೀಕಾಂತ್ ಪೂಜಾರಿ ಬಿಡುಗಡೆಗೆ ಆಗ್ರಹಿಸಿ, ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕರ ಸೇವಕ ಹುಬ್ಬಳ್ಳಿ ಶ್ರೀಕಾಂತ ಪೂಜಾರಿ ಬಂಧನ ಮೂಲಕ, ರಾಜ್ಯ ಕಾಂಗ್ರೆಸ್​ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ಕೋಮಿನ ಜನರ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿದರು.

ಯಾದಗಿರಿ: ಕರ ಸೇವಕ ಹುಬ್ಬಳ್ಳಿ ಶ್ರೀಕಾಂತ ಪೂಜಾರಿ ಬಂಧನ ಮೂಲಕ, ರಾಜ್ಯ ಕಾಂಗ್ರೆಸ್​ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಒಂದು ಕೋಮಿನ ಜನರ ಓಲೈಕೆ ಮಾಡುತ್ತಿದೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಡಾ.ಶರಣ ಭೂಪಾಲರಡ್ಡಿ ಮಾತನಾಡಿ, ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಈ ಸಮಯದಲ್ಲಿ ಹಳೇ ಪ್ರಕರಣಗಳಿಗೆ ಮರು ಜನ್ಮ ನೀಡಲಾಗಿದೆ. ಪೊಲೀಸರ ಮೇಲೆ ಒತ್ತಡ ಹೇರಿ ಕರಸೇವಕರಾಗಿ ಸೇವೆ ಸಲ್ಲಿಸಿದ್ದ ಶ್ರೀಕಾಂತ ಪೂಜಾರಿ ಬಂಧನ ಮಾಡಲಾಗಿದೆ. ಇದೊಂದು ವ್ಯವಸ್ಥಿತ ಪಿತೂರಿ. ಹಿಂದೂಪರ ಹೋರಾಟಗಳನ್ನು, ಕಾರ್ಯಕರ್ತರನ್ನು ಹತ್ತಿಕ್ಕುವ ತಂತ್ರವಾಗಿದೆ. ಧರ್ಮ ಕಾರ್ಯಗಳಿಗೆ ಮುಂದಾಗಲು ಯುವಕರು ಹಿಂಜರಿಯಬೇಕೆಂಬ ಉದ್ದೇಶದಿಂದ 31 ವರ್ಷದ ಬಳಿಕ ಬಂಧನ ಮಾಡಿಸಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಲಲಿತಾ ಅನಪುರ ಮಾತನಾಡಿ, ದೇಶದೆಲ್ಲೆಡೆ ಶ್ರೀರಾಮ ಮಂದಿರದ ಉದ್ಘಾಟನಾ ಕಾರ್ಯದ ಸಂಭ್ರಮ ಮನೆ ಮಾಡಿದೆ. ರಾಜ್ಯದಲ್ಲಿ ಕೋಮುಗಲಭೆಗೆ ಪ್ರಚೋದನೆ ನೀಡುವ ಮೂಲಕ ಅದರ ಮಹತ್ವ ಕುಗ್ಗಿಸಲಾಗುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಕೇವಲ ಒಂದು ಕೋಮಿನ ಓಲೈಕೆ ಮಾಡುತ್ತಿದ್ದಾರೆ, ತುಷ್ಟೀಕರಣ ನೀತಿಯಿಂದ ಹಿಂದುಗಳಿಗೆ ಅನ್ಯಾಯ ಎಸಗುತ್ತಿದ್ದಾರೆ. ತಕ್ಷಣ ಇಂಥ ಚಟುವಟಿಕೆಗಳು ನಿಲ್ಲಬೇಕು. ಶ್ರೀಕಾಂತ ಪೂಜಾರಿ ಬಿಡುಗಡೆಗೊಳಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಿಜೆಪಿ ಜಿಲ್ಲಾ ಉಸ್ತುವಾರಿ ಅಮರನಾಥ ಪಾಟೀಲ್, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ ಬಿನ್ನಾಡಿ, ಹಿರಿಯ ಮುಖಂಡೆ ನಾಗರತ್ನಾ ಕುಪ್ಪಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟರಡ್ಡಿ ಅಬ್ಬೆತುಮಕೂರು, ಜಿಲ್ಲಾ ವಕ್ತಾರ ಎಚ್.ಸಿ.ಪಾಟೀಲ್, ಶರಣುಗೌಡ ಬಾಡಿಯಾಳ, ನಗರಸಭೆ ಸದಸ್ಯ ವಿಲಾಸ ಪಾಟೀಲ್, ಹಣಮಂತ ಇಟಗಿ, ಸ್ವಾಮಿದೇವ ದಾಸನಕೇರಿ, ಸುರೇಶ ಅಂಬಿಗೇರ, ಮಂಜುನಾಥ ದಾಸನಕೇರಿ, ದೇವಿಂದ್ರಪ್ಪ ಕೊನೇರ, ರಾಜುಗೌಡ ಉಕ್ಕಿನಾಳ, ಮಂಜುನಾಥ ಜಡಿ, ರಾಜಶೇಖರ ಕಾಡಂನೊರ, ಮಲ್ಲಿಕಾರ್ಜುನ ಹೊನಿಗೇರಾ, ನಾಗಪ್ಪ ಗಚ್ಚಿನಮನಿ, ಮಾರುತಿ ಕಲಾಲ್, ಶರಣುಗೌಡ ಕವಿತಾಳ, ಭೀಮ ಮಡಿವಾಳ ಸೈದಾಪುರ, ವೀಣಾ ಮೋದಿ, ಮೌನೇಶ ಬೆಳಗೆರಾ, ಶಕುಂತಲಾ, ಮಹಾದೇವಪ್ಪ ಗಣಪುರ, ಸುನಿತಾ ಚೌವ್ಹಾಣ, ಭೀಮಾಬಾಯಿ ಶಂಡಗಿ, ಸ್ನೇಹಾ ರಸಾಳಕರ, ಚಂದ್ರಶೇಖರ ಕಡೇಸೂರ, ಅಜೇಯ ಮಡ್ಡಿ, ಶ್ರೀಧರ್ ರೈಚೂರ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು.