ಗ್ರಾಮ ಪಂಚಾಯಿತಿ ಆಡಳಿತ ಅವಧಿ ಮುಗಿಯುತ್ತಿರುವ ಗ್ರಾ.ಪಂ.ಗಳಿಗೆ ಈಗಿರುವ ಆಡಳಿತ ಸಮಿತಿಯನ್ನು ಮರುನೇಮಕ ಮಾಡಲು ಹರಿಹರ ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷ ಡಿ.ಡಿ. ಚಿಕ್ಕಣ್ಣ ಹಾಗೂ ದೇವರಬೆಳಕರೆ ಗ್ರಾಪಂ ಅಧ್ಯಕ್ಷೆ ಆರ್.ಟಿ. ಸೀತಾ ಒತ್ತಾಯಿಸಿದ್ದಾರೆ.

- ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಯೋಜನೆ: ಅಧ್ಯಕ್ಷ

- - -

ಹರಿಹರ: ಗ್ರಾಮ ಪಂಚಾಯಿತಿ ಆಡಳಿತ ಅವಧಿ ಮುಗಿಯುತ್ತಿರುವ ಗ್ರಾ.ಪಂ.ಗಳಿಗೆ ಈಗಿರುವ ಆಡಳಿತ ಸಮಿತಿಯನ್ನು ಮರುನೇಮಕ ಮಾಡಲು ಹರಿಹರ ತಾಲೂಕು ಗ್ರಾಪಂ ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷ ಡಿ.ಡಿ. ಚಿಕ್ಕಣ್ಣ ಹಾಗೂ ದೇವರಬೆಳಕರೆ ಗ್ರಾಪಂ ಅಧ್ಯಕ್ಷೆ ಆರ್.ಟಿ. ಸೀತಾ ಒತ್ತಾಯಿಸಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ತಾಲೂಕಿನ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಜ.29ರಂದು ಆಗಮಿಸಬೇಕು ಎಂದು ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರ ಆದೇಶ ಹೊರಡಿಸಿ, ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳಿಗೆ ಅವಕಾಶ ನೀಡದೇ ಅಧಿಕಾರಿಗಳಿಗೆ ಆಡಳಿತ ನಡೆಸುವ ಅವಕಾಶ ನೀಡುವುದು ಪ್ರಜಾಪ್ರಭುತ್ವ ವಿರೋಧಿ ತೀವ್ರವಾಗಿ ಖಂಡಿಸುತ್ತೇವೆ ಎಂದಿದ್ದಾರೆ.

ಸರ್ಕಾರ ಆದೇಶ ಹೊರಡಿಸಿ ಕರ್ನಾಟಕ ಗ್ರಾಮ ಸ್ಮರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 8(1)ಬಿ(ಎ)ರ ಅನ್ವಯ ಆಡಳಿತಾವಧಿ ಮುಗಿಯುತ್ತಿರುವ ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಆದರೆ, ಕರ್ನಾಟಕ ಗ್ರಾಮ ಸ್ಮರಾಜ್ ಮತ್ತು ಪಂಚಾಯತ್‌ರಾಜ್ ಅಧಿನಿಯಮ 1993ರ ಪ್ರಕರಣ 8(1)ಬಿ ಅನ್ವಯ ಚುನಾಯಿತರಾಗಲು ಅರ್ಹ ವ್ಯಕ್ತಿಗಳನ್ನು ಒಳಗೊಂಡ ಆಡಳಿತ ಸಮಿತಿಯನ್ನು ನೇಮಕ ಮಾಡಲು ಅವಕಾಶವಿದೆ. ರಾಜ್ಯ ಸರ್ಕಾರ ಪ್ರಜಾಪ್ರಭುತ್ತ ವ್ಯವಸ್ಥೆಯಲ್ಲಿ ಪ್ರಜಾಪ್ರತಿನಿಧಿಗಳಿಗೆ ಅವಕಾಶ ನೀಡದೇ, ಅಧಿಕಾರಿಗಳಿಗೆ ಆಡಳಿತ ನಡೆಸುವ ಅವಕಾಶ ನೀಡುವ ಮೂಲಕ ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ನಡೆಯುತ್ತಿದೆ ಎಂದು ದೂರಿದ್ದಾರೆ.

ಈ ಸಂಬಂಧ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಮತ್ತು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನೆನಪಿಸಿ, 2020ರಲ್ಲಿ ಕೋವಿಡ್ ಕಾರಣದಿಂದಾಗಿ ಗ್ರಾ.ಪಂ.ಗಳ ಅವಧಿ ಮುಕ್ತಾಯವಾದಾಗ ಆಡಳಿತ ಸಮಿತಿ ಅವಧಿಯನ್ನು ವಿಸ್ತರಿಸಬೇಕೆಂದು ಒತ್ತಾಯಿಸಿದ್ದನ್ನು ಉಲ್ಲೇಖಿಸಿದ್ದಾರೆ. ಸರ್ಕಾರವು ಗ್ರಾಮ ಪಂಚಾಯಿತಿಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸುವ ಪ್ರಜಾಪ್ರಭುತ್ವ ವಿರೋಧಿ ಆದೇಶ ಹಿಂಪಡೆದು ಕಾಯ್ದೆ ಅನ್ವಯ ಆಡಳಿತಾವಧಿ ಕೊನೆಗೊಳ್ಳುತ್ತಿರುವ ಆಡಳಿತ ಸಮಿತಿಯನ್ನು ಪುನರ್ ನೇಮಕ ಮಾಡಬೇಕೆಂದು ಆಗ್ರಹಿಸಿದ್ದಾರೆ.

- - -