ತೊಗರಿ ಪರಿಹಾರಕ್ಕಾಗಿ ರೈತರೊಂದಿಗೆ ಪ್ರತಿಭಟನೆ

| Published : Dec 09 2024, 12:47 AM IST

ತೊಗರಿ ಪರಿಹಾರಕ್ಕಾಗಿ ರೈತರೊಂದಿಗೆ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬರಗಾಲದಿಂದ ಹಾನಿ ಅನುಭವಿಸುತ್ತಿರುವ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಬಾರಿ ಜಿಲ್ಲಾದ್ಯಂತ ಬಿತ್ತನೆ ಮಾಡಿದ್ದ ತೊಗರಿ ಬೆಳೆಯು ಶೇ.80ರಷ್ಟು ಹಾನಿಯಾಗಿದ್ದರೂ ಸ್ಪಂದಿಸದ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧ ಡಿ.9ರಂದು ತಾಳಿಕೋಟೆಯಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದಾಗಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬರಗಾಲದಿಂದ ಹಾನಿ ಅನುಭವಿಸುತ್ತಿರುವ ರೈತರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ. ಈ ಬಾರಿ ಜಿಲ್ಲಾದ್ಯಂತ ಬಿತ್ತನೆ ಮಾಡಿದ್ದ ತೊಗರಿ ಬೆಳೆಯು ಶೇ.80ರಷ್ಟು ಹಾನಿಯಾಗಿದ್ದರೂ ಸ್ಪಂದಿಸದ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧ ಡಿ.9ರಂದು ತಾಳಿಕೋಟೆಯಲ್ಲಿ ಬೃಹತ್ ಹೋರಾಟ ಹಮ್ಮಿಕೊಂಡಿದ್ದಾಗಿ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಸೋಮವಾರ ಜಿಲ್ಲೆಯ ಮೂಲೆ ಮೂಲೆಯಿಂದ ಸುಮಾರು 600 ಟ್ರ್ಯಾಕ್ಟರ್‌ಗಳಲ್ಲಿ ಸುಮಾರು 20 ಸಾವಿರ ರೈತರ ಜೊತೆ ಸೇರಿ ತಾಳಿಕೋಟೆ ಪಟ್ಟಣದಲ್ಲಿ ಬೃಹತ್‌ ಹೋರಾಟ ಮಾಡಲಾಗುತ್ತದೆ. 2 ನೇ ಹಂತದಲ್ಲಿ ಮಂಗಳವಾರ ಜಿಲ್ಲಾಧಿಕಾರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಕಳಪೆ ಬೀಜ ವಿತರಿಸಿದ ಕಂಪನಿಗಳ ಮೇಲೆ ಕೇಸ್ ದಾಖಲಿಸಲಾಗುವುದು. ಅಂದು ತೊಗರಿ ಬೆಳೆದ ರೈತರೊಂದಿಗೆ ಸೇರಿ ಸಾಮೂಹಿಕವಾಗಿ ಪ್ರತಿ ಹಳ್ಳಿಯಿಂದ ಲೋಕಾಯುಕ್ತ ಕಚೇರಿಗೆ ಬಂದು ದೂರು ಕೊಡಲಿದ್ದೇವೆ. 3ನೇ ಹಂತದಲ್ಲಿ ಬುಧವಾರ ಎಸ್‌ಪಿ ಕಚೇರಿಗೆ ತೆರಳಿ ಡಿಸಿ, ಜೆಡಿ ಹಾಗೂ ಬೀಜ ವಿತರಿಸಿದ ಕಂಪನಿಗಳ ಮೇಲೆ ಕ್ರಿಮಿನಲ್‌ ಕೇಸ್ ತೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಈ ಮೊದಲು ಬಿಜೆಪಿ ರೈತರಿಗಾಗಿ ನೀಡಿದ್ದ ಹಲವು ಯೋಜನೆ, ಸೌಲಭ್ಯಗಳನ್ನು ವಾಪಸ್ ತೆಗೆದುಕೊಂಡಿದೆ ಎಂದು ಟೀಕಿಸಿದರು.

ಸರ್ಕಾರದಿಂದಲೇ ಕಳಪೆ ಬೀಜ ವಿತರಿಸಿದ್ದಾರೆ. ಅದರ ಬಗ್ಗೆ ಸಮಗ್ರ ತನಿಖೆ ಆಗಬೇಕು. ತೊಗರಿ ಬೆಳೆಯ ಬಗ್ಗೆ ಲೋಕಾಯುಕ್ತರು ಸಹ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಆಡಳಿತ ಪಕ್ಷದ ಶಾಸಕರೇ ಹೇಳುವಂತೆ ಸುಮಾರು 5 ಸಾವಿರ ಕೋಟಿಯಷ್ಟು ತೊಗರಿ ನಷ್ಟವಾಗಿದೆ. ಇದೆಲ್ಲವನ್ನೂ ಸರ್ವೆ ಮಾಡಿ ತನಿಖೆ ಮಾಡುವುವಷ್ಟರಲ್ಲಿ ಜಮೀನಿನಲ್ಲಿನ ಅಲ್ಪಸ್ವಲ್ಪ ಬೆಳೆ ಖಾಲಿಯಾಗುತ್ತದೆ. ಇನ್ನು ಬೆಳೆಯ ಬಗ್ಗೆ ಕೃಷಿ ವಿವಿಯಿಂದ ಸಮೀಕ್ಷೆ ನಡೆಸಿ ವರದಿ ಕೊಟ್ಟಿದಾರೆ. ವರದಿಯಲ್ಲಿ ತೇವಾಂಶದ ಕೊರತೆ ಆಗಿದೆ. ಮಂಜು ಬಿದ್ದು ಹಾಳಾಗಿದೆ, ರೈತರು ಸರಿಯಾಗಿ ತೊಗರಿ ಬಿತ್ತನೆ ಮಾಡಿಲ್ಲ ಎಂದು ಇದೆ. ಇದೆಲ್ಲ ಕುಂಟುನೆಪ ಹೇಳುತ್ತಿದ್ದು. ಲಕ್ಷಾಂತರ ರೈತ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ರೈತರ ಪರವಾಗಿ ನಾವಿದ್ದೇವೆ. ಹೋರಾಟ ಮಾಡುವುದಾಗಿ ಭರವಸೆ ನೀಡಿದರು.

ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಇಲಾಖೆಯಿಂದ ವಿತರಿಸಿದ ತೊಗರಿ ಬೀಜದಲ್ಲಿ ಗೋಲಮಾಲ್ ಆಗಿದೆ. ಕಳೆದ 10 ವರ್ಷಗಳಲ್ಲಿ ಹಂತ ಹಂತವಾಗಿ ಬೀಜಗಳ ದರ ಏರಿಸಿದ್ದು ಮೊದಲು ಒಂದು ಪ್ಯಾಕೆಟ್‌ಗೆ ₹150 ಇದ್ದ ದರ ಈಗ ₹970 ಆಗಿದೆ. ಮೊದಲಿನಿಂದಲೂ ಪ್ರತಿ ಪ್ಯಾಕೆಟ್‌ಗೆ ಶೇ.5 ರಷ್ಟು ರಿಯಾಯಿತಿ ಕೊಡುತ್ತಿದ್ದು, ಇದೀಗ ಕೇವಲ ₹ 125 ಮಾತ್ರ ಸಬ್ಸಿಡಿ ಕೊಡಲಾಗುತ್ತಿದೆ. ಎಲ್ಲ ಬೀಜಗಳ ವಿತರಣೆ ಮಾಡುವಾಗ ಮೊದಲಿನಂತೆ ಅದನ್ನು ಶೇ.50 ರಿಯಾಯಿತಿ ಕೊಡಬೇಕು ಎಂದು ಆಗ್ರಹಿಸಿದರು..

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಬಾಲರಾಜ ರೆಡ್ಡಿ, ರಾಜಶೇಖರ ಡೊಳ್ಳಿ, ಪಾಂಡು ಸಾಹುಕಾರ, ಡಿ.ಜಿ.ಬಿರಾದಾರ, ರೇಣುಕಾ ಪರಸಪ್ಪಗೋಳ, ವಿಜಯ ಜೋಶಿ ಉಪಸ್ಥಿತರಿದ್ದರು.---------ಕೋಟ್‌

ಈ ಬಾರಿ ಉತ್ತರ ಕರ್ನಾಟಕದಲ್ಲಿ ತೊಗರಿ ಬೆಳೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಜಿಲ್ಲೆಯಲ್ಲಿ 5.34 ಲಕ್ಷ ಹೆಕ್ಟೇರ್ ತೊಗರಿ ಬೆಳೆಯಲಾಗಿದೆ. ಅದರಲ್ಲಿ ಶೇ.80ರಷ್ಟು ಬೆಳೆ ಹೂ ಕಟ್ಟಿದ ಮೇಲೆ, ಕಾಯಿ ಆಗುವ ಮೊದಲೇ ಉದುರಿದೆ. ಇದುವರೆಗೂ ಡಿಸಿ ಹಾಗೂ ಉಸ್ತುವಾರಿ ಸಚಿವರು, ಕೃಷಿ ಇಲಾಖೆ ಅಧಿಕಾರಿಗಳು ಇದನ್ನು ಗಮನಿಸಿಲ್ಲ. ಇದೆಲ್ಲವನ್ನು ನೋಡಿದರೆ ನಮ್ಮ ಜಿಲ್ಲೆಯಲ್ಲಿ ಜಿಲ್ಲಾಡಳಿತವೇ ಸತ್ತುಹೋಗಿದೆ. ಉಸ್ತುವಾರಿ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲದಂತಾಗಿದೆ.

- ಎ.ಎಸ್‌.ಪಾಟೀಲ ನಡಹಳ್ಳಿ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ